ರಾಯಚೂರು. ನಗರದ ಮಹಾವೀರ್ ವೃತ್ತದ ಮೇಲೆ ಕಂದಗಡ್ಡೆ ಮಾರೆಮ್ಮ ದೇವಸ್ಥಾನ ಮುಂದೆ ಇರುವ ಚರಂಡಿಯಲ್ಲಿ ಕುಡಿಯುವ ನೀರು ವ್ಯರ್ಥವಾಗಿ ಪೋಲಾಗುತ್ತಿದ್ದು, ನಗರಸಭೆ ಕ್ರಮಕ್ಕೆ ಮುಂದಾಗದಿದ್ದಲ್ಲಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಕರವೇ(ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ಅಶೋಕಕುಮಾರ ಸಿ.ಕೆ.ಜೈನ್ ತಿಳಿಸಿದ್ದಾರೆ.
ಗಂಗಾ ನಿವಾಸದಿಂದ ಮಾರೆಮ್ಮ ದೇವಸ್ಥಾನದ ಮುಂದಿನ ಚರಂಡಿಗೆ ನೀರು ಹರಿದು ಬರುತ್ತದೆ, ಸಿಕ್ಕಾಪಟ್ಟೆ ಪ್ಲಾಸ್ಟಿಕ್ ಇತ್ಯಾದಿ ಕಸಗಳಿಂದ ತುಂಬಿ, ಚರಂಡಿಯಲ್ಲಿ ನೀರು ಹರಿಯದಂತೆ ಬ್ಲಾಕ್ ಆಗುತ್ತೆ. ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಬಿಡುತ್ತಾರೆ. ಆದರೇ ಸಾರ್ವಜನಿಕರು ತಮಗೆ ಕುಡಿಯುವ ನೀರು ಸಾಕಾದ ನಂತರ ಕೊಳಾಯಿ ಬಂದ್ ಬದಲು ಹಾಗೇಯೆ ಬಿಡುತ್ತಾರೆ. ಕುಡಿಯುವ ನೀರು ಚರಂಡಿಯಲ್ಲಿ ಹರಿಯುತ್ತಿದ್ದರೂ ತಡೆಯಲು ಮುಂದಾಗುತ್ತಿಲ್ಲ ಎಂದು ದೂರಿದ್ದಾರೆ.
ಚರಂಡಿಯಲ್ಲಿ ಕಸ ಸ್ವಚ್ಛಗೊಳಿಸಲಿಲ್ಲ ಅಂದರೆ ನೀರು ಹರಿದು ರಸ್ತೆ ಮೇಲೆ ಬರುತ್ತದೆ. ಆ ಹೊಲಸು ಚರಂಡಿ ನೀರು ರಸ್ತೆಯ ಮೇಲೆ ಹೊಳೆ ಹರಿಯುವ ಹಾಗೆ ಹರಿದು ಗಾಂದಿ ಚೌಕವರೆಗೆ ಬರುತ್ತಿದ್ದರೂ ಇತ್ತ ಕಡೆ ನಗರಸಭೆ ಗಮನ ಹರಿಸುತ್ತಿಲ್ಲ. ಕಂದಗಡ್ಡೆ ಮಾರಮ್ಮ ದೇವಸ್ಥಾನಕ್ಕೆ ಶುಭ್ರವಾಗಿ ಬರುವ ಭಕ್ತರಿಗೆ, ಈ ರಸ್ತಯ ಮೇಲೆ ಹರಿಯುವ ಚರಂಡಿ ನೀರಿನಿಂದ, ದೇವಸ್ಥಾನಕ್ಕೆ ಹೋಗುವುದಕ್ಕೆ ಭಕ್ತರಿಗೆ ಕಷ್ಟವಾಗುತ್ತದೆ. ಭಕ್ತರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ವೃದ್ದರು, ಮಕ್ಕಳು, ಕಷ್ಟ ಪಟ್ಟು ಅಂಗಡಿಗಳ ಕಟ್ಟೆಹತ್ತಿ, ಕಾಲಿಗೆ ಚರಂಡಿ ನೀರು ತಾಕದಂತೆ ಹರಸಾಹಸ ಮಾಡಿ ದೇವಸ್ಥಾನಕ್ಕೆ ಬರುವ ಸ್ಥಿತಿ ಇದೆ. ಚರಂಡಿ ಸ್ವಚ್ಚಗೊಳಿಸದಿದ್ದರೆ ಚರಂಡಿ ನೀರು ರಸ್ತೆ ಮೇಲೆ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಮೌಖಿಕವಾಗಿ ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೆ ಸಮಸ್ಯೆ ಪರಿಹರಿಸಲು ಮುಂದಾಗಬೇಕೆಂದು ಜೈನ್ ಒತ್ತಾಯಿಸಿದ್ದಾರೆ.