ರಾಯಚೂರು : ಸರ್ಕಾರಿ ಕೆಲಸ ಮಾಡಬೇಕಾದ ಶಿಕ್ಷಣ ಇಲಾಖೆ ಸಿ ಆರ್ ಪಿ ಒಬ್ಬರು, ರಾಜಕೀಯ ವ್ಯಕ್ತಿಗಳ ಮನೆಯಲ್ಲಿ ಊಪಹಾರ ಬಡಿಸುವ ಕೆಲಸ ಮಾಡಿರುವ, ವೀಡಿಯೋ ಪೋಟೊಗಳು ವೈರಲ್ ಆಗಿದ್ದು, ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ಸಿಬ್ಬಂದಿ ಹೀಗೆ ಮಾಡಬಹುದಾ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಹೌದು ಸರಕಾರಿ ಕೆಲಸ ಬಿಟ್ಟು ರಾಜಕೀಯ ವ್ಯಕ್ತಿಗಳ ಹಿಂದೆ ಸುತ್ತುತ್ತಿರುವ, ಶಿಕ್ಷಣ ಇಲಾಖೆ ಸಿ.ಆರ್.ಪಿ ಅವರ ನಡೆಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿದೆ. ರಾಯಚೂರು ತಾಲೂಕಿನ ಉಡುಮಗಲ್ ಖಾನಾಪುರ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕ, ರಾಯಚೂರು ದಕ್ಷಿಣ ವಲಯದ ಸಿ ಆರ್ ಪಿ ಆಗಿರುವ ಕೆ.ರಾಮು, ಇಂದು ಬೆಳಿಗ್ಗೆ ಬೆಂಗಳೂರಿನ ಕೆಪಿ ನಂಜುಂಡಿ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.
ಸಿ ಆರ್ ಪಿ ಕೆ.ರಾಮು ಅವರು, ಕೆ.ಪಿ ನಂಜುಂಡಿ ಮನೆಗೆ ಉಪಹಾರಕ್ಕಾಗಿ ಆಗಮಿಸಿದ್ದ, ಡಿ ಕೆ ಶಿವಕುಮಾರ್ ಅವರಿಗೆ ಮತ್ತು ಅಲ್ಲಿ ಕುಳಿತ ಎಲ್ಲರಿಗೂ ಉಪಹಾರ ಬಡಿಸುವ ಕೆಲಸ ಮಾಡಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆ ಸರ್ಕಾರಿ ನೌಕರರು ರಾಜಕೀಯ ವ್ಯಕ್ತಿಗಳ ಹಿಂದೆ ಹೋಗುವಂತಿಲ್ಲ, ಗುರುತಿಸಿಕೊಳ್ಳುವಂತಿಲ್ಲ ಎಂಬ ನಿಯಮವಿದ್ದರೂ, ಅದನ್ನೆಲ್ಲ ಗಾಳಿಗೆ ತೂರಿ ರಾಜಕೀಯ ವ್ಯಕ್ತಿಗಳ ಹಿಂದೆ ಓಡಾಟ ನಡೆಸಿದ್ದು ಸರಿಯೇ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಥವಾ ಜಿಲ್ಲಾ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.