ರಾಯಚೂರು. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರು ಒದಗಿಸಿಕೊಡದ ಗ್ರಾಮ ಪಂಚಾಯತಿ ಕಛೇರಿಗೆ ಕೀಲಿ ಜಡಿದು, ಬೇಲಿ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಮಸ್ಕಿ ತಾಲೂಕಿನ ಪಾಮನ ಕಲ್ಲೂರು ಗ್ರಾಮದಲ್ಲಿ ನಡೆದಿದೆ.
ನವಜೀವನ ಮಹಿಳಾ ಒಕ್ಕೂಟದ ಮಸ್ಕಿ ಘಟಕದ ಅಧ್ಯಕ್ಷೆಯಾಗಿರುವ ಶಾಂಭವಿರವರ ನೇತೃತ್ವದಲ್ಲಿ ಗ್ರಾಮ ಪಂಚಾಯತಿಗೆ ಬೀಗ ಜಡಿದು ಬೇಲಿ ಹಾಕಿ, ಖಾಲಿ ಕೊಡಗಳೊಂದಿಗೆ
ಗ್ರಾಮ ಪಂಚಾಯತಿ ಕಛೇರಿ ಎದುರು
ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಕಳೆದ ಐದಾರು ತಿಂಗಳುಗಳಿಂದ ನೀರಿನ ಸಮಸ್ಯೆ ಹೆಚ್ಚಾಗಿದೆ, ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಗ್ರಾಮದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಗಳು ಹೊಡೆದು ಹೋಗಿವೆ. ಚರಂಡಿಗಳು ಕೊಳಚೆ ನೀರಿನಿಂದ ತುಂಬಿ ಗಬ್ಬೆದ್ದು ನಾರುತ್ತಿವೆ. ಹಿರಿಯ ಅಧಿಕಾರಿಗಳ, ಸ್ಥಳೀಯ ಶಾಸಕರ ಮಾತಿಗೂ ಪಿಡಿಒ ರಾಮಣ್ಣರವರು ಕಿಮ್ಮತ್ತು ನೀಡುತ್ತಿಲ್ಲವೆಂದು ಆಕ್ರೋಶ ಹೊರ ಹಾಕಿದರು.
ಚುನಾವಣೆ ಕಾವು ಜೋರಾಗಿದ್ದು, ಇದರ ನಡುವೆಯೇ ಬಿಸಿಲಿನ ಬೇಗೆಗೆ ತತ್ತರಿಸಿದ ಪಾಮನಕಲ್ಲೂರು ಗ್ರಾಮಸ್ಥರು ನೀರಿನ ಸಮಸ್ಯೆಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳು
ಇನ್ನಾದರೂ ಕುಡಿಯುವ ನೀರಿನ ಸಮಸ್ಯೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.