ಸಿಂಧನೂರು:ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಭಾನುವಾರದಂದು ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹೈ-ಕ ಸ್ಥಳೀಯ ವೃಂದದ -97 ಹುದ್ದೆಗಳ ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೊಠಡಿ ಮೇಲ್ವಿಚಾರಣೆವಹಿಸಿದವರ ಎಡವಟ್ಟಿನಿಂದಾಗಿ ಪರೀಕ್ಷಾರ್ಥಿಗಳಿಗೆ ತೊಂದರೆಯಾಗಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪರೀಕ್ಷಾರ್ಥಿಗಳು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬೆಳಗ್ಗೆ 10 ಗಂಟೆಗೆ ಆರಂಭಿಸಬೇಕಿದ್ದ ಪರೀಕ್ಷೆಯನ್ನು 10.15 ನಿಮಿಷಕ್ಕೆ ಆರಂಭಿಸಿದ್ದಾರೆ. ಸರ್ಕಾರಿ ಮಹಾವಿದ್ಯಾಲಯದ 35 ಕೊಠಡಿಗಳಲ್ಲಿ ಒಟ್ಟು 840 ಪರೀಕ್ಷಾರ್ಥಿಗಳು ಭಾಗವಹಿಸಿದ್ದು. ಬ್ಲಾಕ್ ಸಂಖ್ಯೆ 4 ಮತ್ತು 5ಕ್ಕೆ ನೀಡುವ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ಮೇಲ್ವಿಚಾರಕರು ಎಡವಟ್ಟು ಮಾಡಿಕೊಂಡಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಇದ್ದು, 24 ಪ್ರಶ್ನೆ ಪತ್ರಿಕೆ ಇರುವ ಎರಡು ಬಂಡಲ್ ಪರೀಕ್ಷಾರ್ಥಿಗಳಿಗೆ ವಿತರಣೆ ಮಾಡಬೇಕಿತ್ತು. ಆದರೆ 12 ಪ್ರಶ್ನೆ ಪತ್ರಿಕೆ ಇರುವ ಒಂದೇ ಬಂಡಲ್ ತಂದಿದ್ದು, ಅದು ಅಭ್ಯರ್ಥಿಗಳ ಪರವಾನಿಗೆ ಇಲ್ಲದೆ ಮುಚ್ಚಿದ ಲಕೋಟೆ ತೆರೆಯಲಾಗಿತ್ತು ಎನ್ನಲಾಗಿದೆ. ಇದೇ ವಿಚಾರ ಪರೀಕ್ಷಾರ್ಥಿಗಳಲ್ಲಿ ಗೊಂದಲ ಮೂಡಿಸಿದೆ. ನಂತರ ಎರಡು ಕೊಠಡಿಗಳಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್ ಮುಚ್ಚಿದ ಲಕೋಟೆ ತೆಗೆಯಲಾಗಿದ್ದು, ಒಂದು ಬಂಡಲ್ ನಲ್ಲಿ 12 ಪ್ರಶ್ನೆ ಪತ್ರಿಕೆ ಬಂದಿದ್ದು, ಇನ್ನೊಂದರಲ್ಲಿ 9 ಪ್ರಶ್ನೆಪತ್ರಿಕೆ ಬಂದಿದ್ದು, ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದರು. ಪರೀಕ್ಷಾರ್ಥಿಗಳು ತಮಗಾದ ಅನ್ಯಾಯವನ್ನು ತೋಡಿಕೊಂಡರು. ನಂತರ ಕೆಪಿಎಸ್ ಸಿ ಕಾರ್ಯದರ್ಶಿ ರಣದೀಪ್ ಚೌದರಿ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ಸ್ಥಳಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ ಪರೀಕ್ಷಾರ್ಥಿಗಳು ನಡೆಸಿದ ಪ್ರತಿಭಟನೆಗೆ ಬೆಂಬಲಿಸಿದರು.
ಪರೀಕ್ಷಾ ಸಮಯಕ್ಕೆ ಆಯಾ ಹಾಲ್‌ನಲ್ಲಿದ್ದ ಪರೀಕ್ಷಾರ್ಥಿಗಳಿಗೆ ಸರಿಯಾಗಿ ಪ್ರಶ್ನೆಪತ್ರಿಕೆಗಳನ್ನು ಹಂಚಿಲ್ಲ, ಕೆಲವರಿಗೆ ತಡವಾಗಿ ಹಂಚಲಾಗಿದೆ, ಇನ್ನೂ ಕೆಲ ಕೊಠಡಿಗಳಿಗೆ ಕಡಿಮೆ ಪ್ರಶ್ನೆ ಪತ್ರಿಕೆಗಳು ವಿತರಣೆಯಾಗಿವೆ, ಪರೀಕ್ಷಾ ವೇಳೆಗೆ ನಮಗೆ ಪ್ರಶ್ನೆ ಪತ್ರಿಕೆ ವಿತರಿಸಲು ಕೇಳಿದರೆ ಮೇಲ್ವಿಚಾರಕರು ಸ್ವಲ್ಪ ತಡೆಯಿರಿ ಎಂದು ಹೇಳುತ್ತಿದ್ದಾರೆ. ಹೀಗಾದರೆ ಹೇಗೆ ? ಈ ಪರೀಕ್ಷೆಯಲ್ಲಿ ಏನೋ ನಡೆಯುತ್ತಿದೆ” ಎಂದು ಪರೀಕ್ಷಾ ಕೇಂದ್ರದಿಂದ ಹೊರಬಂದ ಪ್ರತಿಭಟನಾ ನಿರತ ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಭಾನುವಾರ ಪಿಡಿಒ ಸಾಮಾನ್ಯ ಜ್ಞಾನ (ಜಿಕೆ) ಪರೀಕ್ಷೆ ನಡೆದಿದ್ದು, ಆದರೆ ಸರ್ಕಾರಿ ಮಹಾವಿದ್ಯಾಲಯದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂದು ಪರೀಕ್ಷಾರ್ಥಿಗಳು ಆರೋಪಿಸಿ, ಪ್ರತಿಭಟನೆ ನಡೆಸಿರುವುದರಿಂದ ಈ ಬಗ್ಗೆ ಸಮಗ್ರ ತನಿಖೆಗೆ ನಡೆದು ಏನು ಲೋಪವಾಗಿದೆ ಎಂದು ಪತ್ತೆಹಚ್ಚಬೇಕೆಂದು ಅಭ್ಯರ್ಥಿಗಳು ಆಗ್ರಹಿಸಿದರು
ಹೆದ್ದಾರಿಯಲ್ಲಿ ಕುಳಿತ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲವೊತ್ತು ಉದ್ರಿಕ್ತ ವಾತಾವರಣ ಕಂಡುಬಂತು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪರೀಕ್ಷಾರ್ಥಿಗಳು ಹೆದ್ದಾರಿಯಲ್ಲಿ ದಿಢೀರ್ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರಿಂದ, ಈ ಮಾರ್ಗದಲ್ಲಿ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪರೀಕ್ಷಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಹೆಣಗಾಡಬೇಕಾಯಿತು.
ತಹಸೀಲ್ದಾರ್, ಡಿವೈಎಸ್‌ಪಿ, ಪಿಐ ಸೇರಿದಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಪರೀಕ್ಷಾರ್ಥಿಗಳನ್ನು ಮನವೊಲಿಸಲು ಯತ್ನಿಸಿದರೂ ಫಲಪ್ರದವಾಗಲಿಲ್ಲ. ಕೆಲವರು ಪರೀಕ್ಷೆ ಬರೆದರೆ, ಅರ್ಧದಷ್ಟು ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾದರು.