Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಸಹಕಾರ ರತ್ನ ಪ್ರಸಸ್ತಿ ಪ್ರದಾನ: ಸಹಕಾರಿ ಪದವೀದರರಿಗೆ ಉದ್ಯೋಗದಲ್ಲಿ ಮೀಸಲು ಪರಿಶೀಲಿಸಿ ಕ್ರಮ – ಸಿದ್ದರಾಮಯ್ಯ

ಸಹಕಾರ ರತ್ನ ಪ್ರಸಸ್ತಿ ಪ್ರದಾನ: ಸಹಕಾರಿ ಪದವೀದರರಿಗೆ ಉದ್ಯೋಗದಲ್ಲಿ ಮೀಸಲು ಪರಿಶೀಲಿಸಿ ಕ್ರಮ – ಸಿದ್ದರಾಮಯ್ಯ

*ಎಲ್ಲರಿಗೂ ನಾನು-ನನಗಾಗಿ ಎಲ್ಲರೂ ಎನ್ನುವುದೇ ಸಹಕಾರಿ ಚಳವಳಿಯ ಮೂಲ ಮಂತ್ರ: ಸಿ.ಎಂ.ಸಿದ್ದ

ಬಾಗಲಕೋಟೆ ನ 17: ಕೋಆಪರೇಟೀವ್ ಮ್ಯಾನೇಜ್ ಮೆಂಟ್ ಪದವೀಧರರಿಗೆ ಉದ್ಯೋಗದಲ್ಲಿ ಮೀಸಲಾತಿ ತರುವ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಆಯೋಜಿಸಿದ್ದ 71ನೇ ಅಖಿಲ‌ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ, 2024 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ವಿತರಿಸಿ ಮಾತನಾಡಿದರು.

ನಾನು ಯಾವತ್ತೂ ಸಹಕಾರಿ ಚಳವಳಿ ಮತ್ತು ಸಹಕಾರಿ ತತ್ವದ ಪರವಾಗಿ ಇರುವವನು. ಈ ಕಾರಣಕ್ಕೆ ಸಹಕಾರ ಇಲಾಖೆಯ ನೇಮಕಾತಿಗಳಲ್ಲಿ ಕೋಆಪರೇಟೀವ್ ಮ್ಯಾನೇಜ್ ಮೆಂಟ್ ಪದವಿ, ಡಿಪ್ಲಮೋ ಪಡೆದವರಿಗೆ ಮೀಸಲಾತಿ ನೀಡುವ ಪರವಾಗಿದ್ದೀನಿ ಎಂದರು.

ರಾಜ್ಯದಲ್ಲಿ ಸಹಕಾರಿ ಚಳವಳಿ 1904 ರಲ್ಲೇ ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭವಾಗಿತ್ತು. 1905 ರಲ್ಲಿ ಸಹಕಾರಿ ನಿಯಮಗಳು ಜಾರಿಗೆ ಬಂದವು. ಸ್ವಾತಂತ್ರ್ಯಾ ನಂತರ ನೆಹರೂ ಅವರು ದೇಶದ ಪ್ರಧಾನಿಯಾಗಿ ಸಹಕಾರಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ ಮತ್ತು ಪ್ರೋತ್ಸಾಹ ಕೊಟ್ಟಿದ್ದರಿಂದ ಸಹಕಾರಿ ಚಳವಳಿ ದೇಶವ್ಯಾಪಿ ವ್ಯಾಪಿಸಲು ಸಹಕಾರಿಯಾಯ್ತು ಎಂದರು.

ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು ಹೆಚ್ಚೆಚ್ಚು ಸಹಕಾರಿ ಚಳವಳಿಯಲ್ಲಿ ತೊಡಗಿಸಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಿಗೆ ಈ ಸಮುದಾಯದ ಯುವಕ/ ಯುವತಿಯರನ್ನು ಉಚಿತವಾಗಿ ಸದಸ್ಯರನ್ನಾಗಿ ಮಾಡಿದ್ದೆ. ಈಗಲೂ ಇದು ಮುಂದುವರೆಯಬೇಕು ಎಂದು ಕರೆ ನೀಡಿದರು.

ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಇವರಿಂದ ಹೆಚ್ಚೆಚ್ಚು ಹಾಲನ್ನು ಖರೀದಿಸಬೇಕು. ಸಹಕಾರ ಸಂಘಗಳ ಹಾಲಿಗೆ ಮಾರುಕಟ್ಟೆ ವಿಸ್ತರಿಸಬೇಕು. ಚನ್ನಪಟ್ಟಣ ತಾಲ್ಲೂಕೊಂದರಲ್ಲೇ 3 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಲೀ ಹಾಲಿಗೆ 31 ರೂ ಅಂದರೆ 3 ಲಕ್ಷ ಲೀಟರ್ ಗೆ ಕೋಟಿ ರೂಪಾಯಿ ಆಗ್ತದೆ. ಇದು ಆರ್ಥಿಕತೆಗೂ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ. ಹಾಲು ಉತ್ಪಾದಕರಿಗೆ ಅನುಕೂಲ ಆಗುವ ಉದ್ದೇಶದಿಂದಲೇ ನಮ್ಮ ಸರ್ಕಾರ ಕ್ಷೀರಭಾಗ್ಯ ಆರಂಭಿಸಿತು. ಲೀಟರ್ ಹಾಲಿಗೆ 5 ರೂ ಪ್ರೋತ್ಸಾಹ ದನ ನೀಡುವುದನ್ನು ನಮ್ಮ ಅವಧಿಯಲ್ಲಿ ಆರಂಭಿಸಲಾಯಿತು. ರೈತರ ಕೈಯಲ್ಲೇ ಹಾಲು ಉತ್ಪಾದಕ ಸಂಘಗಳು ಇರಬೇಕು ಎನ್ನುವ ಉದ್ದೇಶದಿಂದ ಡೈರಿಗಳನ್ನು ರೈತರಿಗೇ ನೀಡುವ ತೀರ್ಮಾನ ಮಾಡಿದೆವು. ಈ ಅಧಿಕಾರ ವಿಕೇಂದ್ರೀಕರಣದಿಂದ ಗ್ರಾಮೀಣ ಆರ್ಥಿಕತೆ ಗಟ್ಟಿಯಾಯಿತು. ಇದೇ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯವೂ ಆಗಿದೆ ಎಂದರು.

ಪಂಚಾಯ್ತಿ, ಸೊಸೈಟಿ, ಶಾಲೆ ಈ ಮೂರೂ ಪ್ರತೀ ಗ್ರಾಮಗಳಲ್ಲಿ ಇರಲೇಬೇಕು. ಆಗಲೇ ಗ್ರಾಮಗಳ ಪ್ರಗತಿ ಸಾಧ್ಯ ಎನ್ನುವುದು ಮಹಾತ್ಮಗಾಂಧಿಯವರ ಆಶಯವಾಗಿತ್ತು‌ ಎಂದರು.

ರಾಜೀವ್ ಗಾಂಧಿಯವರು ಸಂವಿಧಾನಕ್ಕೆ ತಿದ್ದುಪಡಿ ತಂದು ಅಧಿಕಾರ ವಿಕೇಂದ್ರೀಕರಣ ಜಾರಿ ಮಾಡಿ ಮಹಿಳೆಯರು, ಹಿಂದುಳಿದವರು, ದಲಿತರ ಕೈಗೆ ಅಧಿಕಾರ ಸಿಗುವಂತೆ ಮಾಡಿದ್ದನ್ನು ಈ ಸಂದರ್ಭದಲ್ಲಿ ಸಿಎಂ ಸ್ಮರಿಸಿದರು.
ಸಹಕಾರ ಕ್ಷೇತ್ರ ರಾಜ್ಯ ವ್ಯಾಪ್ತಿಗೆ ಸೇರಿದ್ದು. ಆದರೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರದಲ್ಲಿ ಸಹಕಾರ ಇಲಾಖೆ ಆರಂಭಿಸಿದರು. ಇದಕ್ಕೆ ಅಮಿತ್ ಶಾ ಅವರೇ ಸಚಿವರು‌. ಇದು ಕೇಂದ್ರದ ವ್ಯಾಪ್ತಿಗೆ ಬರುವ ವಿಷಯ ಅಲ್ಲ. ಇದರಿಂದಾಗಿ ನಮಗೆ ನಬಾರ್ಡ್ ನಿಂದ ಬರುವ ರೈತರ ಪಾಲಿನ ನೆರವು ಕಡಿತಗೊಂಡಿದೆ. ಒಮ್ಮೆಲೇ 58% ನಬಾರ್ಡ್ ನೆರವು ಕಡಿತಗೊಂಡಿದೆ. ಇದು ನಮ್ಮ ರೈತರಿಗೆ ಆದ ಬಹಳ ದೊಡ್ಡ ಅನ್ಯಾಯ. ರೈತರ ಬಗ್ಗೆ ಬಿಜೆಪಿ ಭಾಷಣ ಮಾತ್ರ ಚನ್ನಾಗಿ ಮಾಡುತ್ತದೆ. ಬರೀ ಭಾಷಣದಿಂದ ರೈತರ ಬದುಕನ್ನು ಉದ್ದಾರ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಬಾರ್ಡ್ ನಿಂದ ನಮಗೆ ಆದ ಅನ್ಯಾಯವನ್ನು ಪ್ರತಿಯೊಬ್ಬರು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

2013 ರಲ್ಲಿ 8165 ಕೋಟಿ ರೈತರ ಸಾಲವನ್ನು ನಾನು ಮೊದಲು ಬಾರಿ ಮುಖ್ಯಮಂತ್ರಿಯಾಗಿ ಮನ್ನಾ ಮಾಡಿದ್ದೆ. ಇದರಿಂದ ಸಹಸ್ರಾರು ರೈತರ ಬದುಕಿಗೆ ನೆರವಾಯಿತು ಎಂದರು.

ಸಮಾನತೆಯ ಸಮಾಜ ನಿರ್ಮಾಣ ಆಗಬೇಕು ಎನ್ನುವ ಆಶಯದಿಂದ ನಾನು ಸಮಾಜದ ಎಲ್ಲಾ ವರ್ಗದವರಿಗೆ ಆರ್ಥಿಕ ಶಕ್ತಿ ನೀಡುವ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿ ಜಾರಿ ಮಾಡಿದೆ ಎಂದರು.

ಕಟ್ಟಡಗಳ ನಿರ್ಮಾಣಕ್ಕೆ ನೆರವು:
ಸಹಕಾರ ಮಹಾಮಂಡಳದ ಕಟ್ಟಡಗಳ ನಿರ್ಮಾಣಕ್ಕೆ ಸರ್ಕಾರದ ನೆರವು ನೀಡಬೇಕು ಎನ್ನುವ ಬೇಡಿಕೆ ಇದೆ. ಈ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.‌

Megha News