Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

National NewsState News

ರಾಜ್ಯಕ್ಕೆ ನಬಾರ್ಡ ಅನುದಾನ ಕಡಿತ: ಕೃಷಿಕರನ್ನು ಲೇವಾದೇವಿಗಳ ಕೈಯಲ್ಲಿ ನೀಡಲು ಮುನ್ನಡಿ- ಸಿದ್ದರಾಮಯ್ಯ

ರಾಜ್ಯಕ್ಕೆ ನಬಾರ್ಡ ಅನುದಾನ ಕಡಿತ: ಕೃಷಿಕರನ್ನು ಲೇವಾದೇವಿಗಳ ಕೈಯಲ್ಲಿ ನೀಡಲು ಮುನ್ನಡಿ- ಸಿದ್ದರಾಮಯ್ಯ

ದೆಹಲಿ ನ 29: ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕೇಂದ್ರ ಸರ್ಕಾರ ಕಡಿತಗೊಳಿಸಿರುವುದರಿಂದ ರೈತರು ಅಧಿಕ ಬಡ್ಡಿಗೆ ಸಾಲಕೊಡುವ ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ರೈತರಿಗೆ ನೀಡುತ್ತಿದ್ದ ಸಬ್ಸಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

ರಾಜ್ಯದ ರೈತರಿಗೆ ಮಾತ್ರ ನಬಾರ್ಡ್ ಸಾಲದ ಪ್ರಮಾಣ ಕಡಿಮೆ ಮಾಡಿಲ್ಲ. ಇಡೀ ದೇಶದಲ್ಲಿ ಕಡಿತಗೊಳಿಸಲಾಗಿದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಇದರಿಂದ ಇಡೀ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ. ಇಡೀ ದೇಶದ ಕೃಷಿ ಉತ್ಪಾದನೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.

ನಬಾರ್ಡ್ 4.5% ಬಡ್ಡಿಗೆ ರೈತರ ಸಾಲದ ಹಣ ನೀಡುತ್ತಿತ್ತು. ನಾವು ರೈತರಿಗೆ ಬಡ್ಡಿ ರಹಿತವಾಗಿ ಸಾಲ ನೀಡಿ ಈ 4.5% ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ ಎಂದರು.‌

15 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆಯಿತು. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಘೋಷಿಸಿ ಒಂದು ಪೈಸೆಯನ್ನೂ ಕೊಡಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೂ ಕೊಡಲಿಲ್ಲ. ಇವೆಲ್ಲದರಿಂದ 11000 ಕೋಟಿ ರೂ ರಾಜ್ಯಕ್ಕೆ ನಷ್ಟವಾಗಿದ್ದನ್ನೂ ಪ್ರಧಾನಮಂತ್ರಿಯವರಿಗೆ ನೆನಪಿಸಿದ್ದೇವೆ. ಹೀಗಾಗಿ ಈ ಬಾರಿ ಮತ್ತೆ ನಬಾರ್ಡ್ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇವೆ ಎಂದರು.

ರಾಜ್ಯದ ಸಂಸದರು ಬಾಯಿ ಬಿಡಲ್ಲ: ಮಣ್ಣಿನ ಮಗ ಮಂತ್ರಿ ಏನು ಮಾಡುತ್ತಿದ್ದಾರೆ?:

ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಮಹದಾಯಿ, ಮೇಕೆದಾಟುಗೆ ಅನುಮತಿ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಮಣ್ಣಿನ ಮಗ ಅಂದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಕ್ಕೆ ಆಗುತ್ತಲೇ ಇರುವ ಅನ್ಯಾಯಗಳ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.

ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

Megha News