ಜಿಲ್ಲಾಡಳಿತ ಭವನಕ್ಕೆ ಡಿಸಿ ಭೇಟಿ
ರಾಯಚೂರು: ಅಪೂರ್ಣ ಕಾಮಗಾರಿಗಳ ಕಾರಣಕ್ಕೆ ರಾಯಚೂರು ಜಿಲ್ಲಾಡಳಿತ ಭವನಕ್ಕೆ ಇಲಾಖೆಯ ಕಚೇರಿಗಳ ಸ್ಥಳಾಂತರ ಮುಂದೂಡತ್ತಾ ಸಾಗಿದ್ದು, ಜ.1ಕ್ಕೆ ತೀರ್ಮಾನಿಸಲಾಗಿದ್ದ ಕಚೇರಿ ಸ್ಥಳಾಂತರವು ಸಂಕ್ರಾಂತಿ ನಂತರದ ದಿನಗಳಿಗೆ ಮುಂದೂಡಿದೆ.
ಯಕ್ಲಾಸಪೂರ ಸಮೀಪದ 18ಎಕರೆ ಜಾಗದಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾದ ನೂತನ ಜಿಲ್ಲಾಡಳಿತ ಭವನ ಕಾಮಗಾರಿ ಇನ್ನೂ ಬಾಕಿ ಉಳಿದಿದ್ದು, ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ರಸ್ತೆ, ಗೇಟ್ ಅಳವಡಿಕೆ, ವಿದ್ಯುತ್ ಸಂಪರ್ಕ, ಪೀಠೋಪಕರಣಗಳು ಸೇರಿದಂತೆ ಹಲವು ಕೆಲಸಗಳು ಇನ್ನೂ ಪೂರ್ಣಗೊಳ್ಳದ ಕಾರಣ ಸಂಕ್ರಾಂತಿ ಹಬ್ಬದ ನಂತರ ಡಿಸಿ ಕಚೇರಿ ಸೇರಿದಂತೆ ಕಂದಾಯ ಇಲಾಖೆ, ಡಿಡಿಎಲ್‌ಆರ್ ಸೇರಿದಂತೆ ಹಲವು ಇಲಾಖೆಗಳು ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಡಿಸಿ ಕೆ.ನಿತೀಶ ಮಾಹಿತಿ ನೀಡಿದ್ದಾರೆ.
ಇದೇ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನಕ್ಕೆ ಸೋಮವಾರ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ ಅವರು, ಜಿಲ್ಲಾಡಳಿತ ಭವನದ ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗನೆ ಮುಗಿಸಲು ಹಾಗೂ ಸುಸ್ಸಜ್ಜಿತ ವ್ಯವಸ್ಥೆಯನ್ನು ಮಾಡಿಕೊಳ್ಳುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈಗಿರುವ ಡಿಸಿ ಕಚೇರಿ ಜಾಗದಲ್ಲಿ ರಾಯಚೂರು ಮಹಾನಗರ ಪಾಲಿಕೆಯನ್ನು ಸ್ಥಳಾಂತರಿಸಲಾಗುತ್ತದೆ. ಜತೆಗೆ ಡಿಸಿ ಕಚೇರಿಯ ಬಲ ಭಾಗದಲ್ಲಿರುವ ಹಳೆ ಕಟ್ಟಡಗಳನ್ನು ತೆರುವುಗೊಳಿಸಿ ಮಹಾನಗರ ಪಾಲಿಕೆಗೆ ಸನುಕೂಲವಾಗುವಂತೆ ಸಭಾಂಗಣವನ್ನು ನಿರ್ಮಿಸಲು ಯೋಜನೆ ರೂಪಿಸಲು ಚಿಂತನೆ ಇದೆ ಈ ಬಗ್ಗೆ ಮುದಿನ ದಿನಗಳಲ್ಲಿ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಭವನಕ್ಕೆ ಭೇಟಿ:
ರಾಯಚೂರು ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿದ ನಂತರ ಡಿಸಿ ಕೆ.ನಿತೀಶ ಒಪೆಕ್ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ಕೊರತೆಯಾಗದಂತೆ ಸೂಕ್ತ ಚಿಕಿತ್ಸೆ ನೀಡಬೇಕು. ಜತೆಗೆ ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಎಲ್ಲ ವಿಭಾಗದ ಐದ್ಯರು ತಮಗೆ ನಿಯೋಜಿಸಲಾದ ಸಮಯದಲ್ಲಿ ಹಾಜರಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ರಿಮ್ಸ್ ಆಡಳಿತಾಧಿಕಾರಿ ಡಾ.ಕೆ.ಆರ್.ದುರುಗೇಶ, ಒಪೆಕ್ ವಿಶೇಷಾಧಿಕಾರಿ ಡಾ.ರಮೇಶ ಸಾಗರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಗಣೇಶ, ವೈದ್ಯ ಸುರೇಶ ಸಗರದ ಸೇರಿದಂತೆ ಇತರರಿದ್ದರು.