ರಾಯಚೂರು: ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಳಪೆ ಔಷಧಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಆರೋಪಿಸಿದರು.
ಜಿಲ್ಲೆಯ ಸಿಂಧನೂರಿನಲ್ಲಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದ ವಿವಿಧೆಡೆ ಸಂಭವಿಸಿದ ಬಾಣಂತಿಯರ ಸರಣಿ ಸಾವಿನ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ಬಾಣಂತಿಯರ ಸಾವಿನ ಪ್ರಕರಣ ಆಗಿರುವಲ್ಲಿಗೆ ಸಮಿತಿ ಭೇಟಿ ಕೊಡುತ್ತಿದೆ ಎಂದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ, ಮುಖಂಡ ಡಾ. ಬಸವರಾಜ್ ಕ್ಯಾವಟರ್, ಡಾ. ಅರುಣಾ, ಡಾ.ನಾರಾಯಣ್, ಕ್ಷೇತ್ರದ ನಾಯಕರಾದ ಕರಿಯಪ್ಪ, ವಿರೂಪಾಕ್ಷಪ್ಪ ಅವರು, ಜಿಲ್ಲಾ ಪಂಚಾಯಿತಿ ಸದಸ್ಯರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇವೆ. ಕೋಲ್ಕತ್ತ ಕಂಪೆನಿಯಿಂದ ಸರಬರಾಜಾದ ಔಷಧಿಯ ಪರಿಣಾಮವಾಗಿ ಬಳ್ಳಾರಿಯಲ್ಲಿ 6 ಜನರು ಮೃತಪಟ್ಟ ಮಾದರಿಯಲ್ಲೇ ಹಲವೆಡೆ ಸಾವು ಸಂಭವಿಸುತ್ತಿದೆ ಎಂದರು.
ಬಾಣಂತಿಯರ ಸಾವು ಮರಣಮೃದಂಗದಂತೆ ಮುಂದುವರೆದಿದೆ ಎಂದು ಆಕ್ಷೇಪಿಸಿದ ಅವರು, ಸರಕಾರ ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು. ಎಫ್‍ಎಸ್‍ಎಲ್ ವರದಿಯ ವಿವರವನ್ನು ಸರಕಾರ ಇನ್ನೂ ಬಹಿರಂಗಪಡಿಸಿಲ್ಲ ಎಂದು ಅವರು ದೂರಿದರು.
ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು; ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಅಗತ್ಯ ವೈದ್ಯರು, ಸಿಬ್ಬಂದಿ ನೇಮಕಾತಿಗೆ ಆಗ್ರಹಿಸುವುದಾಗಿ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ರಾಯಚೂರು ಜಿಲ್ಲೆಯಲ್ಲಿ 12 ಬಾಣಂತಿಯರು ಸತ್ತಿದ್ದು ನವಜಾತ ಶಿಶುಗಳು ಅನಾಥವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಆರೋಗ್ಯ ಸಚಿವರು ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದ್ದಾರೆ. ಅವರು ದುಡ್ಡು ಹೊಡೆಯುವುದರಲ್ಲಿ ನಿಸ್ಸೀಮರಾಗಿದ್ದಾರೆ. ಸ್ವತಃ ವೈದ್ಯರಾದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಮಾನವೀಯತೆ ದೃಷ್ಟಿಯಿಂದ ರಿಮ್ಸ್ ಆಸ್ಪತ್ರೆಯ ಮುಖ್ಯಸ್ಥರ ಸಭೆ ನಡೆಸಿ ಕಾರಣಗಳನ್ನು ತಿಳಿದುಕೊಂಡಿಲ್ಲ ಎಂದು ಟೀಕಿಸಿದರು. ಅವರು ಆ ಹುದ್ದೆಗೆ ಅರ್ಹರಲ್ಲ ಎಂದು ತಿಳಿಸಿದರು. ರಿಮ್ಸ್ ಆಸ್ಪತ್ರೆ ಸಾವಿನ ಕೂಟವಾಗಿದೆ ಎಂದು ಹೇಳಿದರು.
ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ ಅವರು ಮಾತನಾಡಿ, ಸರಕಾರ ಎಫ್‍ಎಸ್‍ಎಲ್ ವರದಿಯನ್ನು ಮುಚ್ಚಿಡುತ್ತಿದೆ ಎಂದು ಟೀಕಿಸಿದರು. ಸರಕಾರದ ಅವಿವೇಕತನ ಜನರಿಗೆ ತಿಳಿಯಲಿದೆ ಎಂದು ಪಲಾಯನವಾದ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಶೈಲೇಂದ್ರ ಬೆಲ್ದಾಳೆ, ಕು. ಸಿ. ಮಂಜುಳಾ, ಡಾ. ಬಸವರಾಜ ಕ್ಯಾವಟರ್, ಡಾ. ನಾರಾಯಣ್, ಡಾ. ಅರುಣ, ವಿಜಯಲಕ್ಷ್ಮಿ ಕರೂರ, ಡಾ. ಲಕ್ಷ್ಮಣ್, ರತನ್ ರಮೇಶ್ ಪೂಜಾರಿ, ಮಾಜಿ ಸಂಸದ ವಿರೂಪಾಕ್ಷಪ್ಪ, ಮುಖಂಡ ಕೆ. ಕರಿಯಪ್ಪ, ಪಕ್ಷದ ಸ್ಥಳೀಯ ಪದಾಧಿಕಾರಿಗಳು, ಮುಖಂಡರು, ಪ್ರಮುಖರಿದ್ದರು.