ರಾಯಚೂರು: ಜಿಲ್ಲೆಯ ಮಾನವಿ ತಾಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ್ದು, ತೆಲಂಗಾಣ ಮತ್ತು ಮಹಾರಾಷ್ಟçದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಬರ್ಡ್ ಫ್ಲೂ ಹರಡುತ್ತಿರುವ ಆತಂಕ ಸೃಷ್ಟಿಯಾಗಿದ್ದು, ಮಾನ್ವಿ ತಾಲೂಕಿನಲ್ಲಿ ಪ್ರತೀದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ವಿವಿಧ ಪ್ರಭೇದದ ಪಕ್ಷಿಗಳ ಸಾವನ್ನಪ್ಪುತ್ತಿದೆ. ಕಾರಣ ಗೊತ್ತಾಗದೇ ಹೋಗಿದೆ.
ಮಕ್ಸೂದ್ ಅಲಿ ಎಂಬುವವರ ತೋಟದಲ್ಲಿ ಪ್ರತಿದಿನ 8-10 ಪಕ್ಷಿಗಳು ಸಾವನ್ನಪ್ಪುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪಕ್ಷಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಸಾಯುತ್ತಿವೆ. ಪಕ್ಷಿಗಳ ಸಾವಿಗೆ ಕಾರಣ ತಿಳಿಯದಿರುವುದರಿಂದ ಸ್ಥಳೀಯರಲ್ಲಿ ಹಕ್ಕಿ ಜ್ವರದ ಆತಂಕ ಶುರುವಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪಶುವೈದ್ಯಾಧಿಕಾರಿಗಳು, ಮರದಿಂದ ಬಿದ್ದ ಪಕ್ಷಿಗಳಿಗೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಿದ್ದಾರೆ. ಮೃತ ಪಕ್ಷಿಯ ಕಳೆಬರವನ್ನು ಬೆಂಗಳೂರಿನ ಐಎಚ್‌ವಿಎ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾನ್ವಿ ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಹಿರೇಮಠ ಅವರು, ಪಕ್ಷಿಗಳ ಸಾವಿಗೆ ಬೇರೆ ಬೇರೆ ಕಾರಣಗಳು ಇರುತ್ತದೆ. ಈಗಲೇ ಏನನ್ನೂ ಹೇಳಲು ಆಗಲ್ಲ. ಪ್ರಯೋಗಾಲಯದ ವರದಿ ಬಂದ ನಂತರ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ. ಆದರೆ ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟç ರಾಜ್ಯದಲ್ಲಿ ಹಕ್ಕಿಜ್ವರ ಹಿನ್ನಲೆಯಲ್ಲಿ ಕೋಳಿ ಸಾಗಾಣೆ ನಿರ್ಬಂಧಿಸಲಾಗಿದೆ. ಅದರೆ ಪಶು ಇಲಾಖೆ ರಾಜ್ಯದ ಮಟ್ಟದಿಂದ ಯಾವುದೇ ಸೂಚನೆ ಬಾರದೇ ಇರುವರಿಂದ ನಿರ್ಬಂದಿಸುವ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ.