Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

Feature ArticleNational News

ಕೇಂದ್ರ ಬಜೆಟ್ ಅನುದಾನ ಹಂಚಿಕೆಯಲ್ಲಿ ಚುನಾವಣಾ ರಾಜಕೀಯ: ದಕ್ಷಿಣ ರಾಜ್ಯಗಳಿಗೆ ಆರ್ಥಿಕ ಸಂಕಷ್ಟ

ಕೇಂದ್ರ ಬಜೆಟ್ ಅನುದಾನ ಹಂಚಿಕೆಯಲ್ಲಿ ಚುನಾವಣಾ ರಾಜಕೀಯ: ದಕ್ಷಿಣ ರಾಜ್ಯಗಳಿಗೆ ಆರ್ಥಿಕ ಸಂಕಷ್ಟ

 

ಚುನಾವಣೆಗಳು ಹತ್ತಿರವಿರುವುದರಿಂದ ಬಿಹಾರಕ್ಕೆ ವಿಶೇಷ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ದಕ್ಷಿಣದ ರಾಜ್ಯಗಳ ಬೇಡಿಕೆಗಳನ್ನು ಸಂಪೂರ್ಣವಾಗಿ ಅವಗಣಿಸಿದ್ದು ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಕೇವಲ ಒಂದು ಸಣ್ಣ ತುಂಡಲ್ಲ, ಇಡೀ ರೊಟ್ಟಿಯನ್ನೇ ಬಿಹಾರಕ್ಕೆ ಕೊಡಲಾಗಿದೆ.
—————————–

ಕೇಂದ್ರ ಬಜೆಟ್‌ನಲ್ಲಿ ಅನ್ಯಾಯವಾಗಿರುವ ಬಗ್ಗೆ ದಕ್ಷಿಣದ ರಾಜ್ಯಗಳು ಮತ್ತು ಅವುಗಳ ನಾಯಕರು ಭಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಮುಂದೆ ಇದ್ದಿದ್ದರಿಂದ ವಿಶೇಷ ಅನುದಾನ ಸಿಗಬಹುದು ಎಂಬುದನ್ನು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ದಕ್ಷಿಣದ ರಾಜ್ಯಗಳಿಗೆ ನಿಜಕ್ಕೂ ಆಘಾತಕಾರಿಯೆನಿಸಿದ್ದು, ತಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಕೇವಲ ರೊಟ್ಟಿಯ ಒಂದು ಸಣ್ಣ ತುಂಡಲ್ಲ, ಇಡೀ ರೊಟ್ಟಿಯನ್ನೇ ಬಿಹಾರಕ್ಕೆ ಕೊಟ್ಟಿದ್ದಾಗಿದೆ.

12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿದ್ದರಿಂದ ಹೆಚ್ಚು ಸಂಖ್ಯೆಯ ತೆರಿಗೆ ಪಾವತಿದಾರರಿಗೆ ಲಾಭವಾಗುತ್ತದೆ ಎಂಬುದನ್ನು ಸಂಭ್ರಮಿಸುವ ರೀತಿಯಲ್ಲಿ ಬಿಂಬಿಸಿದ್ದನ್ನು ಬಿಟ್ಟರೆ, ವಾಸ್ತವದ ಸಮಸ್ಯೆಗಳನ್ನು ಹಾಗೆಯೇ ಉಳಿಸಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ತಪ್ಪಾದ ಆದ್ಯತೆಯನ್ನು ನೀಡಲಾಗಿದ್ದು, ಮುಖ್ಯವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳನ್ನು ಮತ್ತು ಇತರ ತಳ ಸಮುದಾಯಗಳನ್ನು ಕಡೆಗಣಿಸಲಾಗಿದೆ.

ಭಾರತದ ಜನಸಂಖ್ಯೆಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಪಾಲು ಶೇ. 25.2ರಷ್ಟಿದ್ದು, ಇದಕ್ಕೆ ಹೋಲಿಸಿದರೆ ಅವರಿಗೆ ಕೊಡಲಾದ ಅನುದಾನವು ಅತ್ಯಂತ ಕಡಿಮೆ ಪ್ರಮಾಣದ್ದಾಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಎಸ್‌ಸಿ/ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಹಂಚಿಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕಾನೂನನ್ನು ಜಾರಿ ಮಾಡಿವೆ. ಬಜೆಟ್‌ ಹಂಚಿಕೆ ವಿಚಾರದಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ನ್ಯಾಯ ಒದಗಿಸಲು ರಾಷ್ಟ್ರೀಯ ಎಸ್‌ಸಿಎಸ್‌ಪಿ/ಟಿಎಸ್‌ಪಿ (ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ) ನೀತಿಯನ್ನು ತುರ್ತಾಗಿ ಜಾರಿ ಮಾಡಬೇಕಿದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅಥವಾ ಯಾವ ಸಿದ್ಧಾಂತದ ಪರವಾಗಿದ್ದರೂ ಎಸ್‌ಸಿ/ಎಸ್‌ಟಿ ಅಭಿವೃದ್ಧಿಗೆ ಆ ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಬಜೆಟ್‌ ಅನುದಾನ ಸಂದಾಯವಾಗುವಂತಹ ಕಾನೂನು ರೂಪಿಸಬೇಕಿದೆ. ಈ ಮೂಲಕ ಇತಿಹಾಸದುದ್ದಕ್ಕೂ ಚಾಲ್ತಿಯಲ್ಲಿರುವ ಅಸಮಾನತೆ ನಿವಾರಣೆಗೆ ಇದು ಅತ್ಯಗತ್ಯವಾಗಿದೆ. ಹಾಗಾಗಿ ಈ ಕಾನೂನನ್ನು ಜಾರಿಗೊಳಿಸಲು ರಾಜಕೀಯ ವಿಭಜನೆಯನ್ನು ಮೀರಿ ಸಂಸತ್ತಿನಲ್ಲಿ ಧ್ವನಿಯೇರಿಸಬೇಕಿದೆ. ಈ ಮೂಲಕ ಎಸ್‌ಸಿ/ಎಸ್‌ಟಿ ಸಮುದಾಯಗಳನ್ನು ಒಳಗೊಂಡ ಸಮಾನ ಅಭಿವೃದ್ಧಿ ಮತ್ತು ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸ್ಪಷ್ಟ ನಿಲುವು ತಳೆಯಬೇಕಿದೆ.

ಪ್ರಸ್ತುತ ದೇಶದ ಶೇ. 40ರಷ್ಟು ಸಂಪತ್ತು ಶೇ. 1ರಷ್ಟಿರುವ ಮಂದಿಯ ಕೈಯಲ್ಲಿದೆ. ಇದು ಸಂಪತ್ತಿನ ಅತಿದೊಡ್ಡ ಕಂದಕವಾಗಿದೆ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ. ಕೇಂದ್ರ ಸರ್ಕಾರವು ಸಾಮಾಜಿಕ ಭದ್ರತೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಕೊಡುವ ಅನುದಾನವನ್ನು ಹೆಚ್ಚಿಸಬೇಕು. ಒಟ್ಟಾರೆ ಬಜೆಟ್‌ನಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಕಡಿಮೆಯಾಗಿದೆ.

ದೇಶಕ್ಕೆ ಸದೃಢ ರೈಲ್ವೆ ಜಾಲದ ಅಗತ್ಯವಿದೆ, ಆದರೆ ಕೇಂದ್ರ ಸರ್ಕಾರವು ವಂದೇ ಭಾರತ್‌ ಮತ್ತು ನಮೋ ಭಾರತ್ ರೈಲುಗಳ ಪ್ರದರ್ಶನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಈ ರೈಲುಗಳು ಈಗಾಗಲೇ ಉತ್ತಮ ರೈಲ್ವೆ ಸಂಪರ್ಕ ಹೊಂದಿರುವ ಪ್ರದೇಶಗಳಿಗೆ ಹೋಗುತ್ತಿವೆ, ಸೌಲಭ್ಯ ವಂಚಿತ ಪ್ರದೇಶಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಜ್ವಲಂತ ಉದಾಹರಣೆಗೆ ಕರ್ನಾಟಕವು ದೇಶದ ಕಡಿಮೆ ರೈಲ್ವೆ ಸಂಪರ್ಕ ಜಾಲವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.
ಪ್ರತಿ 100 ಚದರ ಕಿ.ಮೀ.ಗೆ ಕರ್ನಾಟಕವು ಕೇವಲ 2.62 ಕಿ.ಮೀ. ರೈಲ್ವೆ ಹಳಿಗಳನ್ನು ಹೊಂದಿದೆ. ಉತ್ತರ ಪ್ರದೇಶದಲ್ಲಿ ಈ ಪ್ರಮಾಣವು 6.24 ಕಿ.ಮೀ. ಇದೆ. ಪಶ್ಚಿಮ ಬಂಗಾಳದಲ್ಲಿ 11.79 ಕಿ.ಮೀ. ಇದೆ. ರೈಲ್ವೆ ಸಚಿವಾಲಯವು ಈ ಅನ್ಯಾಯದ ಬಗ್ಗೆ ಒಪ್ಪಿಕೊಂಡಿದ್ದರೂ ರೈಲ್ವೆ ಜಾಲವನ್ನು ಅಭಿವೃದ್ಧಿ ಪಡಿಸಲು ಹೆಚ್ಚಿನ ಅನುದಾನವನ್ನು ಎನ್‌ಡಿಎ ಸರ್ಕಾರ ನೀಡುತ್ತಿಲ್ಲ.

ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಕೃಷಿ ಅಭಿವೃದ್ಧಿಯ ಮೊದಲ ಇಂಜಿನ್‌ ಎಂದಿರುವುದು ಸರಿಯಾದ ಮಾತಾಗಿದೆ. 2022ರ ವೇಳೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಪ್ರಧಾನಿ 2016ರಲ್ಲಿ ಭರವಸೆ ಕೊಟ್ಟಿದ್ದರು. ಇಂದಿನ ವರೆಗೆ ಅವರ ಆದಾಯ ಎರಡು ಪಟ್ಟಾಗಿದ್ದನ್ನು ನೋಡಿಲ್ಲ, ಭಾರತದ ಅರ್ಧಕ್ಕಿಂತ ಹೆಚ್ಚು ರೈತರು ಸಾಲದ ಹೊರೆಯಲ್ಲಿದ್ದಾರೆ. ಕರ್ನಾಟಕವನ್ನು ತೆಗೆದುಕೊಂಡರೆ ರಾಷ್ಟ್ರದಲ್ಲಿ ಅತ್ಯುತ್ತಮ ಕೆಂಪು ಮೆಣಸಿನಕಾಯಿಯನ್ನು ಉತ್ಪಾದಿಸಲಾಗುತ್ತದೆ. ಅದರ ಆಕರ್ಷಕ ಬಣ್ಣ ಮತ್ತು ಶ್ರೀಮಂತ ಸ್ವಾದಕ್ಕೆ ಹೆಸರುವಾಸಿಯಾಗಿದೆ. ರಾಯಚೂರು ಜಿಲ್ಲೆಯ ರೈತರು ಗರಿಷ್ಠ ಪ್ರಮಾಣದ ಫಸಲನ್ನು ತೆಗೆಯಬಲ್ಲರು. ಆದರೆ ಮಾರುಕಟ್ಟೆ ವೈಫಲ್ಯದಿಂದ ದೊಡ್ಡ ಪ್ರಮಾಣದ ಕೆಂಪು ಮೆಣಸಿನಕಾಯಿ ಮಾರಾಟವಾಗದೆ ಕೋಲ್ಡ್‌ ಸ್ಟೋರೇಜ್‌ನಲ್ಲಿ ಬಿದ್ದಿದೆ. ರೈತರಿಗೆ ತಾವು ಬೆಳೆದ ಬೆಳೆಗೆ ಪೂರಕ ಬೆಲೆ ಸಿಗದಿದ್ದರೆ ಬಂಪರ್ ಫಸಲು ತೆಗೆದು ಏನು ಪ್ರಯೋಜನ?

ಕೇಂದ್ರ ಸರ್ಕಾರವು ಕೃಷಿ ಎಂದರೆ ಕೇವಲ ಉತ್ಪಾದಿಸುವುದಲ್ಲ, ಅದಕ್ಕೆ ಪೂರಕವಾದ ಮಾರುಕಟ್ಟೆಯನ್ನು ಒದಗಿಸಬೇಕು. ನೈಸರ್ಗಿಕ ವಿಕೋಪದಿಂದ ಬೆಳೆ ನಷ್ಟವಾದರೆ ಪರಿಹಾರ ಒದಗಿಸುವುದೊಂದೆ ಅಲ್ಲ, ಮಾರುಕಟ್ಟೆ ವೈಫಲ್ಯದಿಂದ ಕೃಷಿಕರಿಗೆ ಉಂಟಾಗುವ ನಷ್ಟವನ್ನು ಭರ್ತಿ ಮಾಡುವ ಕೆಲಸವನ್ನು ಮಾಡಬೇಕು. ಯಾವ ಬೆಳೆಯನ್ನು ಎಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಎಂಬ ಸಲಹೆ ಸೂಚನೆಗಳನ್ನು ಕೇಂದ್ರ ಕೃಷಿ ಸಚಿವಾಲಯವು ನೀಡಬೇಕು. ಆದರೆ ದುರಾದೃಷ್ಟವೆಂದರೆ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ದೃಷ್ಟಿಯು ಕುರುಡಾಗಿದೆ. ಬಜೆಟ್‌ನಲ್ಲಿ ಹತ್ತಿ ಉತ್ಪಾದನೆಗೆ ಸಂಬಂಧಿಸಿದ ಯೋಜನೆ ಘೋಷಿಸಿರುವುದು ಸ್ವಾಗತಾರ್ಹ. ಕರ್ನಾಟಕವು ಅತಿಹೆಚ್ಚು ಹತ್ತಿ ಉತ್ಪಾದನಾ ರಾಜ್ಯವಾಗಿದೆ. ಹಾಗಾಗಿ ಈ ಯೋಜನೆಯನ್ನು ಬಹಳ ನಿರೀಕ್ಷೆಯಿಂದ ಎದಿರುನೋಡಲಾಗುತ್ತಿದೆ. ಆದರೆ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸುವ ಮೊದಲು ರೈತರ ಜೊತೆ ಸಮಾಲೋಚನೆ ನಡೆಸಬೇಕಿದೆ.

ವಿತ್ತ ಸಚಿವರು ಹೇಳುವಂತೆ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ) ಅಭಿವೃದ್ಧಿಯ ಎರಡನೇ ಇಂಜಿನ್‌ ಆಗಿದೆ. ಆದರೆ ಬಜೆಟ್ ಭಾಷಣದಲ್ಲಿ ಏನು ಹೇಳಲಾಯಿತು ಎಂಬುದರಷ್ಟೇ ಮುಖ್ಯವಾದದ್ದು ಏನನ್ನು ಹೇಳದೆ ಬಿಡಲಾಯಿತು ಎಂಬುದಾಗಿದೆ. 2016 ಮತ್ತು 2021ರ ಮಧ್ಯೆ, ಅಸಂಘಟಿತ ವಲಯದ 1.3 ಕೋಟಿ ಕಾರ್ಮಿಕರು ಕಣ್ಮರೆಯಾಗಿದ್ದಾರೆ, 24 ಲಕ್ಷ ಉದ್ಯಮಗಳು ಮುಚ್ಚಿವೆ, ಮತ್ತು ಉತ್ಪಾದನಾ ಉದ್ಯೋಗ ಕ್ಷೇತ್ರದಲ್ಲಿ 81 ಲಕ್ಷ ಉದ್ಯೋಗಗಳು ನಷ್ಟವಾಗಿವೆ.

ಈ ಬಜೆಟ್ ಅನ್ನು ವಿವಿಧ ಯೋಜನೆಗಳಡಿ ಸಾಲದ ಮಿತಿಯನ್ನು ಹೆಚ್ಚಿಸುವ ಆಶಯವನ್ನು ಹೊಂದಿರುವ ಬಜೆಟ್ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಹಿಂದುಳಿದ ಪ್ರದೇಶಗಳಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಹೊಂದಿರುವವರಿಗೆ ಕನಿಷ್ಠ ಸಾಲ ಸೌಲಭ್ಯವೂ ಸಿಗುತ್ತಿಲ್ಲ ಎಂಬುದು ವಾಸ್ತವ. ಮುದ್ರಾ ಯೋಜನೆಯಡಿ ಲಭಿಸುವ ಗರಿಷ್ಠ ಸಾಲ ಕೇವಲ 50,000 ರೂ.. ಹಳ್ಳಿಗಾಡಿನ ಮತ್ತು ಹಿಂದುಳಿದ ಪ್ರದೇಶಗಳ ಸಣ್ಣ ಉದ್ದಿಮೆದಾರರಿಗೆ 10 ಲಕ್ಷಗಳಷ್ಟು ಸಾಲ ಸೌಲಭ್ಯ ಸಿಗುವುದಿಲ್ಲ ಎಂದಾದರೆ ಸಾಲದ ಮಿತಿ ಹೆಚ್ಚಳದ ಈ ಪ್ರಕ್ರಿಯೆ ಸಹಕಾರಿಯಾಗಲು ಹೇಗೆ ಸಾಧ್ಯ?

ಹಿಂದುಳಿದ ಪ್ರದೇಶಗಳ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆದಾರರಿಗೆ ಸಾಲ ಸೌಲಭ್ಯವನ್ನು ಒದಗಿಸಲು ಇನ್ನಿಲ್ಲದ ಸಬೂಬುಗಳನ್ನು ಹೇಳುವ ಬ್ಯಾಂಕುಗಳು ಬಂಡವಾಳಶಾಹಿಗಳ ದೊಡ್ಡ ಮೊತ್ತದ ಸಾಲವನ್ನು ಮನ್ನಾ ಮಾಡುವುದರಲ್ಲಿ ನಿರತವಾಗಿವೆ. ಆದರೆ, ಬಜೆಟ್ ಭಾಷಣದಲ್ಲಿ ಈ ಯಾವ ಅಂಶಗಳು ಪರಿಗಣನೆಗೆ ಬರುವುದೇ ಇಲ್ಲ. ಸರ್ಕಾರದ ನೀತಿಗಳು, ನೆರವುಗಳು, ಬೃಹತ್ ಪ್ರಮಾಣದ ಸಾಲ ಮನ್ನಾದಂಥ ಓಲೈಕೆಯ ಕ್ರಮಗಳಿಂದ ಇತ್ತ ಉಳ್ಳವರಿಗೆ ಅನುಕೂಲವಾಗುತ್ತಿದ್ದರೆ, ಅತ್ತ ಸಣ್ಣ ಉದ್ದಿಮೆದಾರರು ಸಂಕಷ್ಟಕ್ಕೆ ಸಿಲುಕಿ ಅನಿವಾರ್ಯವಾಗಿ ಉದ್ದಿಮೆಗಳ ಬಾಗಿಲು ಮುಚ್ಚುವ ದಯನೀಯ ಸ್ಥಿತಿಗೆ ತಲುಪುತ್ತಿದ್ದಾರೆ.

ವಿಶೇಷ ವೈದ್ಯಕೀಯ ಸೇವೆಗಳು ಸರ್ವರಿಗೂ ಲಭ್ಯವಾಗುವಂತೆ ಸಮರ್ಪಕ ಮತ್ತು ಅತ್ಯಾಧುನಿಕ ವೈದ್ಯಕೀಯ ವ್ಯವಸ್ಥೆಯ ತುರ್ತು ಅಗತ್ಯತೆ ಇದೆ. ಆದರೆ, ಸುಸಜ್ಜಿತ ‘ಏಮ್ಸ್’ ಆಸ್ಪತ್ರೆಯನ್ನು ಹೊಂದಿರದ ಪ್ರಮುಖ ರಾಜ್ಯವೆಂದರೆ ಅದು ಕರ್ನಾಟಕ. ರಾಯಚೂರಿನಲ್ಲಿ ‘ಏಮ್ಸ್’ ಸ್ಥಾಪಿಸಬೇಕೆಂಬ ಕನ್ನಡಿಗರ ಬೇಡಿಕೆ ಇಂದಿಗೂ ಬೇಡಿಕೆಯಾಗಿಯೇ ಉಳಿದಿದೆ.

ಭಾರತದ ಒಟ್ಟು ಜನಸಂಖ್ಯೆಯ ಶೇ. 5ರಷ್ಟಿದ್ದರೂ, ದೇಶದ ಜಿ.ಡಿ.ಪಿಗೆ ಕರ್ನಾಟಕ ಶೇ. 8.4 ರಷ್ಟು ಕೊಡುಗೆಯನ್ನು ನೀಡುತ್ತಿದೆ. 2018-19 ರಲ್ಲಿ 24.42 ಲಕ್ಷ ಕೋಟಿ ರೂಪಾಯಿಗಳಷ್ಟಿದ್ದ ಕೇಂದ್ರದ ಬಜೆಟ್ 2025-26 ಹೊತ್ತಿಗೆ ದುಪ್ಪಟ್ಟುಗೊಂಡು 50.65 ಲಕ್ಷ ಕೋಟಿ ರೂಪಾಯಿಗಳಷ್ಟಾಗಿದೆ. ಆದರೆ, ಕರ್ನಾಟಕಕ್ಕೆ ಸಲ್ಲಬೇಕಾದ ಪಾಲಿನಲ್ಲಿ ಮಾತ್ರ ಯಾವುದೇ ಹೆಚ್ಚಳವಾಗಿಲ್ಲ. 2018-19ರಲ್ಲಿ ಕರ್ನಾಟಕಕ್ಕೆ ಸಿಕ್ಕ ಪಾಲು 46,288 ಕೋಟಿ ರೂಪಾಯಿಗಳು. ಆದರೆ, 2024-25ರ ಬಜೆಟ್ ನಲ್ಲಿ ರಾಜ್ಯಕ್ಕೆ ಸಿಕ್ಕ ಪಾಲು ಕೇವಲ 44,485 ಕೋಟಿ ರೂಪಾಯಿಗಳು ಮಾತ್ರ. ಇದರ ಜೊತೆಗೆ ಹೆಚ್ಚುವರಿಯಾಗಿ 15,299 ಕೋಟಿ ರೂಪಾಯಿಗಳ ಅನುದಾನವನ್ನು ನೀಡಲಾಗಿತ್ತಷ್ಟೇ. ದೇಶದ ಆರ್ಥಿಕತೆಗೆ ಕರ್ನಾಟಕದ ಕೊಡುಗೆಯನ್ನು ಪರಿಗಣಿಸಿ ನೋಡುವುದಾದರೆ ರಾಜ್ಯಕ್ಕೆ ವಾರ್ಷಿಕವಾಗಿ 1 ಲಕ್ಷ ಕೋಟಿಯಷ್ಟು ಪಾಲು ಸಿಗಬೇಕು. ಆದರೆ, ಉತ್ತರಪ್ರದೇಶ, ಬಿಹಾರ, ಮಧ್ಯ ಪ್ರದೇಶ, ಮತ್ತು ರಾಜಸ್ಥಾನಗಳಿಗೆ ಅನುದಾನದ ಹೊಳೆಯೇ ಹರಿಯುತ್ತದೆ.

ಕೇಂದ್ರ ಬಜೆಟ್ ಸಂಪನ್ಮೂಲಗಳ ಸಮಾನ ಹಂಚಿಕೆಯನ್ನು ಪ್ರತಿಬಿಂಬಿಸಬೇಕು. ದೇಶದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುವ ದಕ್ಷಿಣ ರಾಜ್ಯಗಳನ್ನು ನಿರ್ಲಕ್ಷಿಸಬಾರದು. ಕೇಂದ್ರ ಸರ್ಕಾರವು ತನ್ನ ತಪ್ಪಾದ ಆದ್ಯತೆಗಳನ್ನು ಸರಿಪಡಿಸಿಕೊಂಡು, ಪ್ರತಿಯೊಂದು ರಾಜ್ಯಕ್ಕೂ ಅದರ ನ್ಯಾಯಯುತ ಪಾಲು ಸಿಗುವಂತೆ ನೋಡಿಕೊಳ್ಳುವ ಸಮಯ ಇದಾಗಿದೆ.

ಜಿ.ಕುಮಾರ ನಾಯಕ

(ನಿವೃತ್ತ ಐಎಎಸ್‌ ಅಧಿಕಾರಿ ಮತ್ತು ರಾಯಚೂರು ಸಂಸದರು)

Megha News