ದೇವದುರ್ಗ: ಅರಕೇರಾ ತಾಲೂಕಿನ ಆಲ್ಕೋಡ ಗ್ರಾಮದ ಕಸ್ತೂರ ಬಾ ವಸತಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ವಿಷ ಸೇರಿಸಿರುವ ಶಂಕೆ ವ್ಯಕ್ತವಾಗಿದೆ.
ಅದೃಷ್ಟವಷಾತ್ ಯಾವುದೇ ವಿದ್ಯಾರ್ಥಿಗಳಿಗೆ ಅಪಾಯ ಸಂಭವಿಸಿಲ್ಲ. ನೂರು ವಿದ್ಯಾರ್ಥಿಗಳು ದಾಖಲಿದ್ದು, ೯೫ ವಿದ್ಯಾರ್ಥಿಗಳು ಹಾಜರಿದ್ದರು. ಮಧ್ಯಾಹ್ನದ ಬಿಸಿಯೂಟಕ್ಕೆ ಅನ್ನ, ಸಾಂಬಾರ್ ತಯಾರಿಸಿದ್ದರು. ಸಾಂಬರ್ ಬಣ್ಣ ಮತ್ತು ವಾಸನೆ ಬದಲಾಗಿರುವುದನ್ನು ಅನುಮಾನಿಸಿದ ಅಡುಗೆ ಸಿಬ್ಬಂದಿ ವಿಜಯಲಕ್ಷ್ಮೀ ತುತ್ತು ಅನ್ನ, ಸಾಂಬರ್ ಸೇವಿಸಿದ್ದಾರೆ. ತಕ್ಷಣ ಅಸ್ವಸ್ಥರಾಗಿದ್ದಾರೆ. ವಿಜಯಲಕ್ಷ್ಮೀಯನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸಾಂಬರ್ ಇದ್ದ ಕೊಠಡಿಯಲ್ಲಿ ಸಿಸಿ ಟಿವಿ ಇಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಜಾಲಹಳ್ಳಿ ಠಾಣೆ ಪೊಲೀಸರು ಸಿಸಿ ಟಿವಿ ಫೂಟೇಜ್ ಪರಿಶೀಲಿಸಿದ್ದಾರೆ. ಅನ್ನ, ಸಾಂಬಾರ್, ಸೇರಿದಂತೆ ವಸತಿ ಶಾಲೆಯಲ್ಲಿದ್ದ ಆಹಾರ ಪದಾರ್ಥಗಳನ್ನು ಆಹಾರ ಸುರಕ್ಷತೆ ಪರೀಕ್ಷೆಗೆ ನೀಡಲಾಗಿದೆ. ಘಟನಾ ಸ್ಥಳಕ್ಕೆ ಡಿಡಿಪಿಐ ಕೆ.ಡಿ ಬಡಿಗೇರ್, ಡಿವೈಪಿಸಿ ಇಂದಿರಾ, ಬಿಇಒ ಎಚ್.ಸುಖದೇವ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.