ರಾಯಚೂರು.ಕೋವಿಡ್ ಸಂದರ್ಭದಲ್ಲಿ ಜನ ಮನೆಯಿಂದ ಹೊರ ಬಾರದಂತೆ ಹಾಡಿನ ಮೂಲಕ ಜಾಗೃತಿ ಮೂಡಿಸಿದ್ದ ಜೆಸ್ಕಾಂ ಅಧಿಕಾರಿಯೊಬ್ಬರು ಲೋಕಸಭೆ ಚುನಾವಣೆ ವೇಳೆ ಮತದಾನ ಜಾಗೃತಿ ಕುರಿತು ಮತ್ತೊಂದು ಹಾಡು ರಚಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇಲ್ಲಿನ ಜೆಸ್ಕಾಂನ ಪ್ರಭಾರ ಅಧೀಕ್ಷಕ ಇಂಜಿನಿಯರ್ ಚಂದ್ರಶೇಖರ ದೇಸಾಯಿ ಹಾಡಿದ ಹಾಡು ಎಲ್ಲೆಡೆ ವೈರಲ್ ಆಗುತ್ತಿದೆ. ಕೋವಿಡ್ ವೇಳೆ ದರ್ಶನ ಸಿನಿಮಾದ ಹೆಚ್ಚು ಪ್ರಸಿದ್ಧಿ ಹೊಂದಿದ್ದ ಕಣ್ಣು ಹೊಡಿಯಾಕ ಹಾಡನ್ನು ರಿಮಿಕ್ಸ್ ಮಾಡಿ ಜನರಿಗೆ ಸಂದೇಶ ನೀಡಿದ್ದರು. ಈ ಬಾರಿ ಈಚೆಗೆ ಸಾಕಷ್ಟು ಪ್ರಸಿದ್ಧಿ ಹೊಂದಿರುವ ಕರಟಕ ದಮನಕ ಸಿನಿಮಾದ ಹಿತ್ತಲಾಕ ಕರಿಬ್ಯಾಡ ಮಾವ ಎನ್ನುವ ಹಾಡನ್ನು ರಿಮಿಕ್ಸ್ ಮಾಡಿದ್ದಾರೆ. ಮತದಾನದ ಮಹತ್ವವನ್ನು ಸಾರುವ ಹಾಡನ್ನು ಬಹಳ ಸೊಗಸಾಗಿ ಹಾಡಿದ್ದಾರೆ. ತಾವೆ ಸಾಹಿತ್ಯ ರಚನೆ ಮಾಡಿರುವುದು ವಿಶೇಷ. ಲೋಕಸಭೆ ಚುನಾವಣೆ ಸಮೀಪಿಸಿದೆ. ರಾಜ್ಯದಲ್ಲಿ ಏ ೨೬ ಹಾಗೂ ಮೆ ೭ರಂದು ಚುನಾವಣೆ ನಡೆಯಲಿದ್ದು, ಮನೆಯಲ್ಲಿ ಇರದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನದ ಮಹತ್ವ ಅರಿತು ಅರ್ಹರಿಗೆ ನಿಮ್ಮ ಮತ ನೀಡುವಂತೆ ಹಾಡಿನ ಮೂಲಕವೇ ತಿಳಿಸುವ ಪ್ರಯತ್ನ ಮಾಡಿದ್ದಾರೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರ ಮತ ಬಹಳ ಅತ್ಯಮೂಲ್ಯ ಎಂದು ಹಾಡಿನ ಮೂಲಕ ಸಾರುವ ಪ್ರಯತ್ನ ಮಾಡಿದ್ದಾರೆ. ಇವರ ಹಾಡನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ರಾಹುಲ್ ತುಕಾರಾಂ ಪಾಂಡ್ವೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಸರ್ಕಾರಿ ಅಧಿಕಾರಿಯೊಬ್ಬರು ಈ ರೀತಿ ಟ್ರೆಂಡ್ ಸೃಷ್ಟಿಸಿರುವ ಹಾಡುಗಳನ್ನು ರಿಮಿಕ್ಸ್ ಮಾಡಿ ಜನರಿಗೆ ಆಕರ್ಷಿಸುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.