ರಾಯಚೂರು. ತಾಲೂಕಿನ ಬಿಚ್ಚಾಲಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕಿನಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಯಿಯೊಂದು ಸತ್ತು ಬಿದ್ದಿದ್ದರೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಪರಿಶೀಲಿಸಿದೇ ಕುಡಿಯುವ ನೀರು ಪೂರೈಕೆ ಮಾಡಿರುವದು ಬೆಳಕಿಗೆ ಬಂದಿದೆ.
ಬಿಚ್ಚಾಲಿ ಗ್ರಾಮ ಸೇರಿ ೧೭ ಗ್ರಾಮಗಳಿಗೆ ನೀರು ಪೂರೈಸುವ ಟ್ಯಾಂಕಿನಲ್ಲಿ ನಾಯಿಯೊಂದು ಸತ್ತುಬಿದ್ದಿರುವ ಮಾಹಿತಿ ಹರಡುತ್ತಿದ್ದಂತೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ವಿವಿಧ ಗ್ರಾಮಗಳಲ್ಲಿ ಸುದ್ದಿಹರಡುತ್ತಿದ್ದಂತೆ ಜನರು ಆರೋಗ್ಯ ಪರೀಕ್ಷೆಗೆ ಮುಂದಾಗುತ್ತಿದ್ದಾರೆ. ಕೆಲವರಲ್ಲಿ ವಾಂತಿ ಕಂಡುಬಂದಿದೆ ಯಾದರೂ ಸಾಮೂಹಿಕವಾಗಿ ಪ್ರಕರಣ ವರದಿಯಾಗಿಲ್ಲ. ಘಟನೆ ಸುದ್ದಿ ಹರಡುತ್ತಿದ್ದಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ತಾಂತ್ರಿಕ ಅಧಿಕಾರಿ ಮಹೇಂದ್ರರೆಡ್ಡಿ ಸೇರಿದಂತೆ ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಪ್ರಾರಂಭಿಸಿದ್ದಾರೆ. ಕುಡಿಯುವ ನೀರು ಪೂರೈಸುವ ಯೋಜನೆಯಡಿ ನೀರು ಪೂರೈಕೆಯಾಗಿರುವದು ಹಾಗೂ ನೀರಿನ ಪರೀಕ್ಷೆ ನಡೆಸಲಾಗುತ್ತಿದೆ.
ಗ್ರಾಮಸ್ಥರು ಯಾವುದೇ ರೀತಿಯ ಭೀತಿಗೆ ಒಳಗಾಗದೇ ಎಚ್ಚರದಿಂದ ಇರಲು ಆರೋಗ್ಯ ಇಲಾಖೆ ಮನವಿ ಮಾಡಿದೆ. ದೇಹದಲ್ಲಿ ವ್ಯತ್ಯಾಸವಾದಲ್ಲಿ ಕೂಡಲೇ ವೈಧ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.