ರಾಯಚೂರು:- ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ವಿವಿಧ ಹಂತದ ಅಧಿಕಾರಿಗಳು ಅತ್ಯಂತ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಸಹಾಯಕ ಆಯುಕ್ತ ಹಾಗೂ ಸಹಾಯಕ ಚುನಾವಣಾಧಿಕಾರಿ ಎಸ್.ಎಸ್ ಸಂಪಗಾವಿ ಅವರು ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮತಗಟ್ಟೆಗಳ ವಿವಿಧ ಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿದರು.
ಮತದಾನದ ದಿನ ಮತ್ತು ಮುನ್ನಾ ದಿನ ಈ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿಯವರು ಅತ್ಯಂತ ಅಚ್ಚುಕಟ್ಟಾಗಿ ಶಿಸ್ತು ಬದ್ಧಾಗಿ ಕಾರ್ಯವನ್ನು ನಿರ್ವಹಿಸಬೇಕು. ಚುನಾವಣಾ ಆಯೋಗ ನಿಮಗೆ ಸೇವೆ ಮಾಡಲು ಇದೊಂದು ಅವಕಾಶವನ್ನು ನೀಡಿದೆ .ಬಹಳ ಉತ್ಸಾಹದಿಂದ ಈ ಒಂದು ಕಾರ್ಯವನ್ನ ಮಾಡಬೇಕು ಮಹಿಳೆಯರು ಸಹ ಯಾವುದಕ್ಕೂ ಹೆದರದೆ ತಮಗೆ ನೀಡಿರುವಂತಹ ಜವಾಬ್ದಾರಿಯನ್ನು ನಿರ್ವಹಿಸಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಜಿ.ಎನ್ ಚಲಪತಿ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಡಿ.ಬಡಿಗೇರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸರಿಗಿಡದ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ತರಬೇತಿ ಸಂಸ್ಥೆಯ ಮುಖ್ಯಸ್ಥ ಶ್ರೀನಿವಾಸ್ ಹಾಗೂ ಚುನಾವಣಾ ಮಾಸ್ಟರ್ ತರಬೇತುದಾರ ಸದಾಶಿವಪ್ಪ, ಮತದಾರರ ಸಾಕ್ಷರತಾ ಕ್ಲಬ್‌ನ ದಂಡಪ್ಪ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.