ರಾಯಚೂರು. ಐತಿಹಾಸಿಕ ಮಾವಿನ ಕೆರೆ ಅಭಿವೃದ್ಧಿಗೆ ಒಂದೆಡೆ ಸಿದ್ಧತೆಗಳು ನಡೆದಿದ್ದು, ಮತ್ತೊಂದೆಡೆ ಒತ್ತುವರಿಯಿಂದ ನಗರಸಭೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ತಲೆಬಿಸಿ ಆರಂಬವಾಗಿದೆ. ಈ ಹಿನ್ನೆಲೆಯಲ್ಲಿ ಮಾವಿನ ಕೆರೆಯ ಸರ್ವೆ ಕಾರ್ಯ ಆರಂಭಿಸಲಾಗಿದ್ದು, ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳ ಅಳತೆಗೆ ಸರ್ವೆ ಹಾಗೂ ನಗರಸಭೆ ಅಧಿಕಾರಿಗಳು ಸೋಮವಾರ ಮುಂದಾಗಿದ್ದಾರೆ.
ರಾಯಚೂರಿನ ನಾಗರಿಕರಿಗೆ ಸ್ವಚ್ಛ ಸುಂದರ ಕೆರೆಯನ್ನು ನೋಡುವ ಭಾಗ್ಯ ಸಿಕ್ಕಿತು ಎನ್ನುವ ಸಂದರ್ಭದಲ್ಲಿ ಇದೀಗ ಕೆರೆಯನ್ನು ಎತ್ತೇಚ್ಛವಾಗಿ ಒತ್ತುವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗಳಿಗೆ ಬಿಸಿ ಮುಟ್ಟಿಸಲು ನಗರಸಭೆ ಮುಂದಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆ ರಾಯಚೂರು ಮಾವಿನ ಕೆರೆ ಒತ್ತುವರಿ ತೆರವಿಗೆ ನಗರಸಭೆ ಮುಂದಾಗಿದ್ದು, ಕೆರೆಯ ವಾಸ್ತವ ವಿಸ್ತೀರ್ಣ ಎಷ್ಟಿದೆ ಎಂಬುವುದು ಸದ್ಯದಲ್ಲಿಯೇ ತಿಳಿಯಲಿದೆ.
ಮಾವಿನ ಕೆರೆಯು ಸರ್ವೆ ನಂ.೧೨೩೨/೧ ರಲ್ಲಿ ೧೧೫.೧೮ ಎಕರೆಯಿದ್ದು, ೧೨೩೨/೩ ರಲ್ಲಿ ೩.೨೪ ಎಕರೆ ಇದೆ. ಉಳಿದಂತೆ ೧೨೩೫/*/*ರಲ್ಲಿ ೨.೩೩ ಎಕರೆಯಿದ್ದು, ಆದರೆ ಕೆರೆಯ ಅಭಿವೃದ್ಧಿ ಕೇವಲ ೧೧೫.೧೮ ಎಕರೆ ಪ್ರದೇಶವನ್ನು ಮಾತ್ರ ಗುರುತಿಸಲಾಗಿತ್ತು. ಈ ಬಗ್ಗೆ ನಗರದಲ್ಲಿ ಸಾಕಷ್ಟು ಆಕ್ಷೇಪ, ಚರ್ಚೆಗಳು ವ್ಯಕ್ತವಾಗಿದ್ದು, ಇದೇ ಹಿನ್ನೆಲೆಯಲ್ಲಿ ಕೆರೆಯ ವಾಸ್ತವ ವಿಸ್ತೀರ್ಣವನ್ನು ಕಂಡುಹಿಡಿಯಲು ಹೈಕೋರ್ಟ್ ಆದೇಶ ನೀಡಿದ್ದು, ಅದರಂತೆ ನಗರಸಭೆ ಅಧಿಕಾರಿಗಳು, ಸರ್ವೆ ಇಲಾಖೆ, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆಯೊಂದಿಗೆ ಜಂಟಿಯಾಗಿ ಸರ್ವೆಗೆ ಮುಂದಾಗಿದೆ.
ನಗರದ ಮಂತ್ರಾಲಯ ರಸ್ತೆಯ ನಂದೀಶ್ವರ ದೇವಸ್ಥಾನದ ಪ್ರವೇಶ ದ್ವಾರದ ಪಕ್ಕದಲ್ಲಿ ಸರ್ವೆ ನಂ.೧೨೩೩ ಹಾಗೂ ೧೨೩೪ರಲ್ಲಿರುವ ಖಾಸಗಿ ಲೇಔಟ್‌ನಲ್ಲಿ ಸರ್ವೆ ಮಾಡಿರುವ ಅಧಿಕಾರಿಗಳು ಒತ್ತುವರಿ ಆಗಿರುವುದೇ ಅಥವಾ ಆಗಿಲ್ಲವೇ ಎಂಬ ಬಗ್ಗೆ ವರದಿ ಸಿದ್ದಪಡಿಸಿಕೊಳ್ಳುತ್ತಿದ್ದಾರೆ. ಮಾವಿನ ಕೆರೆಯ ಸರ್ವೆ ಕಾರ್ಯಕ್ಕಾಗಿ ಅಧಿಕಾರಿಗಳು ಮುಂದಾದಾಗ ಖಾಸಗಿ ಲೇಔಟ್ ಮಾಲಿಕರ ಹಾಗೂ ನಗರಸಭೆ ಅಧಿಕಾರಿಗಳ ನಡುವೆ ಮಾತಿನ ಚಕಾಮಕಿಯು ಜರುಗಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ನ.೪ರಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ನೇತೃತ್ವದಲ್ಲಿ ಮಾವಿನ ಕೆರೆ ಅಭಿವೃದ್ಧಿಗಾಗಿ ಭೂಮಿ ಪೂಜೆ ನೆರವೇರಿದ್ದು, ಮೊದಲ ಹಂತದಲ್ಲಿ ಕೆರೆಯ ಸುತ್ತಲೂ ಗ್ರಿಲ್ ಕೂರಿಸಲು ಕಾಮಗಾರಿ ಆರಂಭವಾಗಿತ್ತು. ಇದೀಗ ಕೆರೆಯ ಸರ್ವೆ ಕಾರ್ಯ ಮಾಡಿ ಮುಂದಿನ ದಿನಗಳಲ್ಲಿ ಒತ್ತುವರಿ ಮಾಡಿಕೊಂಡ ಜಾಗವನ್ನು ತೆರವುಗೊಳಿಸುವ ಸಾಧ್ಯತೆಗಳು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ನಗರದ ಜನರಿಗೆ ಕೆರೆಯ ಅಭಿವೃದ್ಧಿಯನ್ನು ಕಾಣುವ ಭಾಗ್ಯ ಸಿಗಲಿದೆಯೇ ಎಂದು ಕಾದು ನೋಡಬೇಕಾಗಿದೆ.