ರಾಯಚೂರು,ಜು.೧೪(ಕ.ವಾ):- ರೈತರಿಗೆ ನೀಡಲಾಗುವ ಬಿತ್ತನೆ ಬೀಜಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಒಂದು ವೇಳೆ ಬಿತ್ತನೆ ಬೀಜಗಳು ಕಳೆಪೆಯಿಂದ ಕೂಡಿರುವುದು ಕಂಡುಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಅಧಿಕಾರಿಗಳಿಗೆ ಸೂಚನೆ ನಿಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೈತ ಸಂಪರ್ಕ ಕೇಂದ್ರ ಅಥವಾ, ಖಾಸಗಿ ಅಂಗಡಿಗಳಿಂದ ರೈತರಿಗೆ ನೀಡಲಾಗುವ ಬಿತ್ತನೆ ಬೀಜಗಳು ಕಳೆಪೆ ಗುಣಮಟ್ಟದಿಂದ ಕೂಡಿರದೇ ಉತ್ತಮ ಗುಣಮಟ್ಟದಿಂದ ಕೂಡಿರಬೇಕು. ಮುಖ್ಯವಾಗಿ ಹತ್ತಿ ಬೆಳೆಯ ಬಿತ್ತನೆ ಬೀಜಗಳಿಗೆ ಕಳಪೆ ಗುಣಮಟ್ಟದ ಬೀಜಗಳನ್ನು ಮಿಶ್ರಣ ಮಾಡುವುದನ್ನು ತಡೆಗಟ್ಟಬೇಕು ಎಂದರು.
ರೈತ ಸಂಪರ್ಕ ಕೇಂದ್ರಗಳು ಮತ್ತು ಕೃಷಿಗೆ ಸಂಬAಧಿಸಿದ ಅಂಗಡಿಗಳಲ್ಲಿ ಕೃಷಿ ಪರಿಕರಗಳು ಹಾಗೂ ಬಿತ್ತನೆ ಬೀಜ, ರಸಗೊಬ್ಬರಗಳ ಕುರಿತು ದರಪಟ್ಟಿ ಫಲಕವನ್ನು ಅಳವಡಿಸಿರುವಂತೆ ನೋಡಿಕೊಳ್ಳಬೇಕು. ಮತ್ತು ಬಿತ್ತನೆ ಬೀಜಗಳ ಕುರಿತು ಹಾಗೂ ಬಿತ್ತನೆ ಮಾಡುವ ವಿಧಾನಗಳ ಕುರಿತು ರೈತರಿಲ್ಲಿ ಆಯಾ ತಾಲೂಕು ವ್ಯಾಪ್ತಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರುಗಳು ಹೆಚ್ಚಿನ ಜಾಗೃತಿ ಮುಡಿಸಬೇಕು ಎಂದರು.
ಫಸಲ್ ಭೀಮಾ ಯೋಜನೆಯು ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಇದರಿಂದ ಕೃಷಿ ಬೆಳೆಗಳಿಗೆ ಸಂಬಂಧಿಸಿದಂತೆ ಹಲವಾರು ಅಪಾಯಗಳಿಂದ ಬೆಳೆ ನಷ್ಟವಾದಾಗ ರೈತರನ್ನು ರಕ್ಷಿಸುವ ಮಾಧ್ಯಮ ಬೆಳೆ ವಿಮೆಯಾಗಿರುತ್ತದೆ ಆದ್ದರಿಂದ ರೈತರಿಗೆ ಈ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಮತ್ತು ಫಸಲ್ ಭೀಮಾ ಯೋಜನೆಯಡಿ ಪ್ರೀಮಿಯಂ ಪಾವತಿ ಮಾಡಿದವರಿಗೆ ಬಿಟ್ಟು ಬೇರೆಯವರಿಗೆ ಹಣ ವರ್ಗಾವಣೆಯಾದಲ್ಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಮಾಹಿತಿ ನೀಡುವ ರಥಕ್ಕೆ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಸಾಹಿತ್ಯ, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್ ದುರುಗೇಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಆರ್..ದೇವಿಕಾ, ರೈತಪರ ಸಂಘಟನೆಗಳ ಮುಖಂಡರಾದ ಚಾಮರಸ ಮಾಲೀಪಾಟೀಲ್, ಶರಣಪ್ಪ ಮರಳಿ, ಪ್ರಭಾಕರ್ ಪಾಟೀಲ್, ಬೂದಯ್ಯ ಸ್ವಾಮಿ, ರಾಂಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.