ಬೆಳಗಾವಿ: ರಾಜ್ಯದ ಆಯ್ದ 60 ತಾಲ್ಲೂಕುಗಳಲ್ಲಿನ ವಿಜ್ಞಾನ ಸಂಯೋಜನೆ ಹೊಂದಿರುವ 60 ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ‘ಆದರ್ಶ ಪದವಿ ಪೂರ್ವ ಕಾಲೇಜು’ಗಳನ್ನಾಗಿ ಪರಿವರ್ತಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಲಾಗಿದೆ.
ಇದರಡಿ ಪ್ರತಿ ಕಾಲೇಜಿಗೆ ತಲಾ ₹83.30 ಲಕ್ಷ ನೀಡಲಾಗುವುದು.ಒಟ್ಟು ₹50 ಕೋಟಿಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ಕಾಲೇಜುಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಆಧುನಿಕ ತಂತ್ರಜ್ಞಾನ ಆಧಾರಿತ ಬೋಧನಾ ಪರಿಕರಗಳನ್ನು ಒದಗಿಸಿ, ವಿದ್ಯಾರ್ಥಿಗಳನ್ನು ಐಐಟಿ, ಐಐಎಸ್‌ಸಿ, ವೈದ್ಯಕೀಯ ಸಂಸ್ಥೆಗಳಿಗೆ ಪ್ರವೇಶ ಪಡೆಯುವಂತೆ ತರಬೇತುಗೊಳಿಸಲು ಈ ಕಾಲೇಜುಗಳನ್ನು ಅಣಿ ಮಾಡಲಾಗುತ್ತದೆ.
ಕಲಬುರಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ‘ಪಿಎಂ ಮಿತ್ರ ಪಾರ್ಕ್’ ಯೋಜನೆಯಡಿ ಜವಳಿ ಪಾರ್ಕ್ ಸ್ಥಾಪನೆಗೆ ಜಂಟಿ ಒಪ್ಪಂದ ಮತ್ತು ನಿರ್ವಹಣೆಗಾಗಿ ವಿಶೇಷ ಯೋಜನೆಗೆ ರೂಪಿಸಲು ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರಾವಳಿ ಭಾಗದ ಜಲಮೂಲಗಳ ಮಾಲಿನ್ಯವನ್ನು ತಡೆಗಟ್ಟಲು ಕೆ-ಶೋರ್ ಯೋಜನೆಯನ್ನು₹840 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ರಾಜ್ಯ ಮಟ್ಟದ ವಿಶೇಷ ಸಶಕ್ತ ಸಮಿತಿಯನ್ನು ರೂಪಿಸಲಾಗುವುದು. ಇದಕ್ಕೆ ವಿಶ್ವಬ್ಯಾಂಕ್ ಶೇ 70ರಷ್ಟು ಮತ್ತು ರಾಜ್ಯ ಸರ್ಕಾರ ಶೇ 30 ರಷ್ಟು ಮೊತ್ತ ಭರಿಸಲಿವೆ.
ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕಾಗಿ ನೋಂದಣಿ ಮಾಡಿಸಿಕೊಂಡ ಮತ್ತು ಮುಂದೆ ನೋಂದಣಿ ಮಾಡಿಸಿಕೊಳ್ಳಲಿರುವ ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕಕ್ಕೆ ರೈತರೇ ಸ್ವಂತ ಖರ್ಚಿನಲ್ಲಿ ಮೂಲಸೌಕರ್ಯ ಒದಗಿಸಿಕೊಳ್ಳಬೇಕು ಎಂದು ಇಂಧನ ಇಲಾಖೆ ಹೊರಡಿಸಿದ್ದ ಆದೇಶವನ್ನು ಹಿಂದಕ್ಕೆ ಪಡೆಯುವ ವಿಷಯವನ್ನು ಮುಂದೂಡಲಾಗಿದೆ.