ರಾಯಚೂರು. ಕರ್ನಾಟಕ ಮತ್ತು ಆಂಧ್ರಪ್ರದೇಶಕ್ಕೆ ಕಡಿಮೆ ಅಂತರದಲ್ಲಿ ಸಂಪರ್ಕ ಕಲ್ಪಿಸುವ ತುಂಗ ಭದ್ರಾ ನದಿಗೆ ಅಡ್ಡಲಾಗಿ ಚೀಕಲಪರ್ವಿ ಬಳಿ ಬಾಂದಾರು ಸಹಿತ ಸೇತುವೆ ನಿರ್ಮಾಣಕ್ಕೆ ಸಂಪುಟಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.
ಮಾನ್ವಿತಾಲೂಕಿನ ಚೀಕಲಪರ್ವಿ ಬಳಿ ತುಂಗಭ ದ್ರಾ ನದಿಗೆ ಅಡ್ಡಲಾಗಿ ಬಾಂದಾರು ಏತ ಸೇತುವೆ ನಿರ್ಮಾಣ ಮಾಡಲು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ ಅನ್ವಯ 397 ಕೊಟಿ 50 ಲಕ್ಷ ರೂ. ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ.
ಮಾನ್ವಿ ತಾಲ್ಲೂಕಿನ ಕುರ್ಡಿ ಕೆರೆ ತುಂಬಿಸುವ ಯೋಜನೆ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್ ಮೂಲಕ ಚೀಕಲಪರ್ವಿ, ಯಡಿವಾಳ, ಹೊನ್ನರಹಳ್ಳಿ, ಚಿಕ್ಕಬಳ್ಳಾರಿ, ಹತ್ತೊಳ್ಳಿ, ಮಾತುರಿ, ಚಲ್ಲಕೂಡೂರು, ಹಳೆಕೋಟೆ, ಆಯನೂರು, ಚಿಂತಮನದೊಡ್ಡಿ, ಚಿತ್ರಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಸುತ್ತಲಿನ ಗ್ರಾಮಗಳಿಗೆ ಅಂತರ್ಜಲ ಅಭಿವೃದ್ಧಿಗೆ ಈ ಬಾಂದರು ಪ್ರಯೋಜನವಾಗಲಿದೆ ಉದ್ದೇಶದಿಂದ ಸಂಪುಟ ಅನುಮೋದನೆ ನೀಡಿದೆ.
ಸಿಂಧನೂರು-ಮಾನ್ವಿ ಮಾರ್ಗವಾಗಿ ಆಂಧ್ರ ಪ್ರದೇಶದ ಮಂತ್ರಾಲಯ, ಆದೋನಿ, ಕರ್ನೂಲ್ ಹಾಗೂ ಬೆಂಗಳೂರಿಗೆ ಪ್ರಯಾಣ ಬೆಳೆಸುವ ವರಿಗೆ ಈಗ ಚೀಕಲಪರ್ವಿ ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಬಾಂದಾರು ಸಮೇತ ಸೇತುವೆ ಮೂಲಕ ಸಂಚರಿಸಿದರೆ ದೂರ ಕಡಿಮೆಯಾಗಲಿದ್ದು, ಸಂಚಾರದ ಸಮಯ ಸಹ ಉಳಿಯಲಿದ್ದ ಕಾರಣ ಬಹುದಿನದ ಈ ಭಾಗದ ಜನರ ಬೇಡಿಕೆಗೆ ಸಂಪುಟ ಅನುಮೋದನೆ ನೀಡಿದೆ.