ಮಸ್ಕಿ. ಟ್ರ್ಯಾಕ್ಟರ್ ಚಾಲಕ ನಿರುಪಾದಿ ಎನ್ನುವ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಿಎಸ್ಐ ಮಣಿಕಂಠ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ತಾಲೂಕಿನ ರಾಮಲದಿನ್ನಿ ಗ್ರಾಮದ ನಿರುಪಾದಿ ಎನ್ನುವವರು ಮಣ್ಣು ಸಾಗಿಸುತ್ತಿದ್ದಾಗ ತಡೆದು ಅವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು, ಅಲ್ಲದೇ ವಾಲ್ಮೀಕಿ ಸಮಾಜದಿಂದ ಹೋರಾಟ ನಡೆಸಿ ಕೂಡಲೇ ಪಿಎಸ್ಐ ಅವರನ್ನು ಅಮಾನತು ಮಾಡಬೇಕು ಎಂದು ದೂರು ಸಲ್ಲಿಸಲಾಗಿತ್ತು.
ಪಿಎಸ್ಐ ಮಣಿಕಂಠ ವಿರುದ್ಧ ನಿರುಪಾದಿ ಪತ್ನಿ ನೀಡಿದ ದೂರಿನನ್ವಯ ಜಾತಿ ನಿಂದನೆ, ಕೊಲೆ ಬೆದರಿಕೆ ಆರೋಪದಡಿ ಕೇಸ್ ದಾಖಲಾಗಿದ್ದವು.
ಕಳೆದ ಕೆಲ ದಿನಗಳ ಹಿಂದೆಯೇ ಪಿಎಸ್ಐ ಮಣಿಕಂಠ ಸಿಂಧನೂರಿನಿಂದ ಮಸ್ಕಿಗೆ ವರ್ಗಾ ವಣೆ ಯಾಗಿದ್ದರು, ಅಧಿಕಾರ ಸ್ವೀಕರಿಸಿದ್ದ ಮಣಿಕಂಠ ಅನೇಕರ ಜತೆ ಅನುಚಿತವಾಗಿ ವರ್ತಿಸಿದ್ದರು ಎನ್ನುವ ಆಪಾದನೆಗಳು ಇದ್ದವು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖೀಲ್ ಬಿ.ಅಮಾನತಿಗೆ ಶಿಫಾರಸು ಮಾಡಿದ್ದರು. ಪಿಎಸ್ಐ ಮಣಿಕಂಠ ಅವರನ್ನು ಅಮಾನತು ಮಾಡಿ ಬಳ್ಳಾರಿ ವಲಯ ಐಜಿಪಿ ಆದೇಶ ಹೊರಡಿಸಿದ್ದಾರೆ.