ರಾಯಚೂರು:ಶಾಲಾ ಮಕ್ಕಳಿಗೆ ವಿತರಿಸುತ್ತಿರುವ ಮಧ್ಯಾಹ್ನದ ಬಿಸಿಯೂಟ ಗುಣಮಟ್ಟದಿಂದ ಕೂಡಿರಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶಿಧರ ಕುರೇರ್ ಅವರು ಸಿಬ್ಬಂದಿ ಸೂಚನೆ ನೀಡಿದರು.
ಅವರಿಂದು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಮಲ್ಲಟ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಲ್ಲಟ್ ಗ್ರಾಮದ ಉನ್ನತ್ತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಬಿಸಿಯೂಟ ಕೇಂದ್ರದಲ್ಲಿ ಮಕ್ಕಳಿಗೆ ವಿತರಿಸುತ್ತಿರುವ ಆಹಾರ ಧಾನ್ಯಗಳಾದ ಅಕ್ಕಿ, ಬೇಳೆ ಪರಿಶೀಲಿಸಿದ ನಂತರ ಮಧ್ಯಾಹ್ನ ಮಕ್ಕಳಿಗೆ ವಿತರಿಸುತ್ತಿರುವ ಆಹಾರವು ಗುಣಮಟ್ಟದಿಂದ ಕೂಡಿರಬೇಕೆಂದರು.
ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಶಾಲಾ ಭೋಜನಾಲಯ ಕಟ್ಟಡವನ್ನು ಪರಿಶೀಲನೆ ಮಾಡಿ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ಮಾಡಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು.
ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ, ಕೆಲ ಸಲಹೆ ನೀಡಿದರು. ನಂತರ ಎನ್.ಹೋಸೂರು ಗ್ರಾಮದಲ್ಲಿ ಪಿಆರ್‌ಇಡಿ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಎನ್.ಹೋಸೂರು ಗ್ರಾಮದಲ್ಲಿ ಪಿಆರ್‌ಇಡಿ ವತಿಯಿಂದ ಅನುಷ್ಠಾನ ಮಾಡಿದ ಅಮೃತ್ ಸರೋವರ ಕೆರೆಯನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಿರವಾರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ, ನರೇಗಾ ಸಹಾಯಕ ನಿರ್ದೇಶಕರು ಶರ್ಫುನೀಸಾ ಬೇಗಂ, ಪಿಆರ್‌ಇಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹೀರಲಾಲ, ಪಿಡಿಓ ಖಾಜಾಪಾಷಾ, ನರೇಗಾ ತಾಂತ್ರಿಕ ಸಿಬ್ಬಂದಿ ಇತರರು ಇದ್ದರು.