ಬೆಂಗಳೂರು, ರಾಜ್ಯಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಮಾಡುವಂತೆ ಆಸ್ಟ್ರೇಲಿಯನ್ ಹೂಡಿಕೆದಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹ್ವಾನ ನೀಡಿದರು.
ಅವರು ಇಂದು ತಮ್ಮನ್ನು ಭೇಟಿಯಾದ ನವದೆಹಲಿಯಲ್ಲಿನ ಆಸ್ಟ್ರೇಲಿಯನ್ ಹೈಕಮಿಷನರ್ ಫಿಲಿಪ್ ಗ್ರೀನ್ ಅವರೊಂದಿಗೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಹಾಗೂ ಆಸ್ಟ್ರೇಲಿಯಾ ನಡುವಿನ ಬಾಂಧವ್ಯ ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು. ರಾಜ್ಯದಲ್ಲಿ ನಗರ ಸಾರಿಗೆ, ಗ್ರೀನ್ ಫೀಲ್ಡ್ ರೋಡ್ ಕಾರಿಡಾರ್ ಮೊದಲಾದ ವಲಯಗಳಲ್ಲಿ ಹೂಡಿಕೆ ಮಾಡಬಹುದು. ಇದಲ್ಲದೆ ಬೆಂಗಳೂರು ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ತಂತ್ರಜ್ಞಾನ ನಗರಿ, ಜ್ಞಾನ ನಗರಿ ಎಂದೆಲ್ಲ ಹೆಸರುವಾಸಿಯಾಗಿದೆ. ಕೌಶಲ್ಯಯುಕ್ತ ಮಾನವಸಂಪನ್ಮೂಲ ಹಾಗೂ ಅಕುಶಲ ಮಾನವ ಸಂಪನ್ಮೂಲವೂ ಇಲ್ಲಿ ಲಭ್ಯವಿದ್ದು, ಹೂಡಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶವಿದೆ ಎಂದು ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹೈಕಮಿಷನರ್ ಫಿಲಿಪ್ ಗ್ರೀನ್ ಅವರು ತಾವು ಹೂಡಿಕೆದಾರರ ನಿಯೋಗದೊಂದಿಗೆ ಭೇಟಿಯಾಗುವುದಾಗಿ ಹಾಗೂ ಹೂಡಿದಾರರ ಸಭೆ ಆಯೋಜಿಸುವುದಾಗಿ ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿಯೂ ಕರ್ನಾಟಕ ಹಾಗೂ ಆಸ್ಟ್ರೇಲಿಯಾ ನಡುವೆ ಹಲವು ಒಡಂಬಡಿಕೆಗಳನ್ನು ಸಹಿ ಮಾಡಲಾಗಿದೆ. ಮುಂದೆಯೂ ಈ ಬಾಂಧವ್ಯ ಮುಂದುವರೆಯಲಿದೆ ಎಂದು ಸಹಮತಿ ವ್ಯಕ್ತಪಡಿಸಲಾಯಿತು.ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾದ
ಕಾನ್ಸಲ್ ಜನರಲ್ ಹಿಲರಿ ಮೆಕ್ ಗೀಚಿ (Ms Hilary McGeachy), ದಕ್ಷಿಣ ಏಷ್ಯಾ ದಲ್ಲಿ ಆಸ್ಟ್ರೇಲಿಯಾದ ವಾಣಿಜ್ಯ ಹಾಗೂ ವ್ಯಾಪಾರ ಸಚಿವೆ ಕ್ಯಾಥರೀನ್ ಗಲ್ಲಘರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.