ಬೆಂಗಳೂರು. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರ ಗುರುವಾರ 2024-25ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ.
ಲೋಕಸಭಾ ಚುನಾವಣಾ ಕಾರಣ ಇದು ಮಧ್ಯಂತರ ಬಜೆಟ್ ಆಗಿದ್ದು, ರಾಜ್ಯಗಳು ಕೂಡ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿವೆ. ಹೀಗಾಗಿ ಕರ್ನಾಟಕ ಕೂಡ ಹಲವು ನಿರೀಕ್ಷಿಗಳಿಟ್ಟುಕೊಂಡಿದೆ. ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮಂಜೂರು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ನಿರ್ಮಲಾ ಸೀತಾರಾಮನ್‌ಗೆ ಸಿದ್ದರಾಮಯ್ಯ ಪತ್ರ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ಎಸ್ ಬೋಸರಾಜು ಸಲ್ಲಿಸಿದ ಮನವಿಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ಜನವರಿ 25 ರಂದು ಸಚಿವ ಎನ್.ಎಸ್.ಬೋಸರಾಜು ಅವರು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೋರಿ ಮುಖ್ಯಮಂತ್ರಿಗಳಿಗೆ ಔಪಚಾರಿಕವಾಗಿ ಮನವಿ ಸಲ್ಲಿಸಿದ್ದರು. “ಈ ಬೇಡಿಕೆಯು ನಮ್ಮ ಪ್ರಣಾಳಿಕೆಯ ಬದ್ಧತೆಗೆ ಹೊಂದಿಕೆಯಾಗುತ್ತದೆ. ಅದಲ್ಲದೆ ಜಿಲ್ಲೆಯ ಜನರ ಆಕಾಂಕ್ಷೆಗಳ ಪ್ರತಿಬಿಂಬವಾಗಿದೆ. ರಾಯಚೂರು ಪ್ರದೇಶದಲ್ಲಿ ಏಮ್ಸ್‌ನ ನಿರ್ಣಾಯಕ ಅಗತ್ಯವನ್ನು ಒತ್ತಿಹೇಳಿ ವಿವಿಧ ಸಂಘಟನೆಗಳು ಮತ್ತು ವಕೀಲರ ಗುಂಪುಗಳ ನೇತೃತ್ವದಲ್ಲಿ 625 ದಿನಗಳ ನಿರಂತರ ಸತ್ಯಾಗ್ರಹ ನಡೆದಿದೆ” ಎಂದು ರಾಜ್ಯ ಸರ್ಕಾರ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. “ಕೇಂದ್ರ ಸರ್ಕಾರದಿಂದ ಮಹತ್ವಾಕಾಂಕ್ಷೆಯ ಜಿಲ್ಲೆ ಎಂದು ಗುರುತಿಸಲ್ಪಟ್ಟ ರಾಯಚೂರು ಸಂವಿಧಾನದ 371 (ಜೆ) ವಿಧಿಯ ಅಡಿಯಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ. ರಾಜ್ಯ ಸರ್ಕಾರವು ಈ ಹಿಂದೆ ಜೂನ್ ಮತ್ತು ಸೆಪ್ಟೆಂಬರ್ 2023 ರಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರನ್ನು ಉದ್ದೇಶಿಸಿ, ರಾಯಚೂರಿಗೆ ಏಮ್ಸ್‌ನ ಅವಶ್ಯಕತೆಯನ್ನು ಒತ್ತಿಹೇಳಿದೆ. ಹೀಗಾಗಿ 2024-25 ರ ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಈ ವಿಷಯದ ಬಗ್ಗೆ ಸೂಕ್ತ ಪರಿಗಣನೆಗೆ ತೆಗೆದುಕೊಳ್ಳಬೇಕು” ಎಂದು ಮನವಿಯಲ್ಲಿ ತಿಳಿಸಲಾಗಿದೆ. 2024-25 ರ ಕೇಂದ್ರ ಬಜೆಟ್ ಅಧಿವೇಶ ಇನ್ನು, 2024-25 ರ ಕೇಂದ್ರ ಬಜೆಟ್ ಅಧಿವೇಶನವು ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ. ಅಧಿವೇಶನವು ಫೆಬ್ರವರಿ 9 ರಂದು ಮುಕ್ತಾಯಗೊಳ್ಳಬಹುದು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಮಧ್ಯಂತರ ಬಜೆಟ್ ಸಾಮಾನ್ಯವಾಗಿ ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಮಂಗಳವಾರ ಬೆಳಗ್ಗೆ ಸಂಸತ್ತಿನ ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಗಿದೆ.