ರಾಯಚೂರು. ಇಂದಿರಾ ಗಾಂಧಿ ಎಂದರೆ ಕಾಂಗ್ರೆಸ್ ಎಂದು ಹೇಳಿದ ಕಾಂಗ್ರೆಸ್‌ನ ಮುಖಂಡರು ಇದೀಗ ಮೋದಿ ಬಗ್ಗೆ ವ್ಯಕ್ತಿ ಪೂಜೆ ನಿಲ್ಲಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೇಳುತ್ತಿದ್ದು, ಇದಕ್ಕೆ ಕಾರಣ ಮೋದಿ ಹೆಸರಿಂದ ದೇಶದಲ್ಲಿ ಬಿಜೆಪಿಗೆ ಓಟು ಬೀಳುತ್ತಿರುವುದರಿಂದ ಕಾಂಗ್ರೆಸ್ ಗೆ ಭಯ ಶುರುವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮುಖಂಡರು ಅಯೋಧ್ಯೆ ಶ್ರೀ ರಾಮಮಂದಿರ ಬಗ್ಗೆ ಹಗುರ ವಾಗಿ ಮಾತನಾಡಿದ್ದರು, ಆದರೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲಿ ನೆಲೆ ಕಳೆದುಕೊಂಡಿದೆ ಮುಂದಿನ ದಿನಗಳಲ್ಲಿ ದೇಶದಲ್ಲೂ ಕಾಂಗ್ರೆಸ್ ನೆಲಕ್ಕಚ್ಚಲಿದೆ ಎಂದರು.
ಟಿಪ್ಪು ಭಾವಚಿತ್ರಕ್ಕೆ ಅವಮಾನ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಬೇಕು ನಾನು ಹೇಳುವುದು ಏನಿದೆ ಎಂದು ಅವರು ಅನೇಕ ಕಡೆಗಳಲ್ಲಿ ಹಿಂದೂಗಳ ಭಾವನೆಗೂ ಧಕ್ಕೆಯಾಗಿದೆ ಯಾರೆ ತಪ್ಪು ಮಾಡಿದರು ತಪ್ಪು ತಪ್ಪೆ ತನಿಖೆ ನಡೆಸಿ ಶಿಕ್ಷೆ ನೀಡಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಗೆ ರಾಮ, ಹನುಮ ಮತ್ತು ಕೇಸರಿ ಕಂಡರೆ ಅಷ್ಟೊಂದು ಭಯವೇಕೆ, ಮಂಡ್ಯ ಜಿಲ್ಲೆಯ ಕೆರೆಗೋಡು ಧ್ವಜ ಸ್ತಂಭ ವಿವಾದ ಕುರಿತು ಕಾಂಗ್ರೆಸ್ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಕೆರೆಗೋಡು ಗ್ರಾ.ಪಂ ಸಭೆಯಲ್ಲಿ ಹನುಮ ಧ್ವಜ ಹಾರಿಸಲು ನಿರ್ಣಯ ಕೈಗೊಳ್ಳಲಾಗಿದೆ ಈಗ ನಡಾವಳಿ ಪುಸ್ತಕವೇ ನಾಪತ್ತೆಯಾಗಿದೆ ಎಂದರು.