ರಾಯಚೂರು: ನಗರದ ಚಂದ್ರಬಂಡಾ ರಸ್ತೆಯಿಂದ ಗದ್ವಾಲ್ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಒತ್ತುವರಿಯಾಗಿ ನಂತರ ತೆರವಾಗಿದ್ದ ಸರ್ಕಾರಿ ಭೂಮಿಯನ್ನು ಸಂರಕ್ಷಣೆ ಮಾಡುವ ಹಿನ್ನೆಲೆ ಜಿಲ್ಲಾಡಳಿತದಿಂದ ಕಾಂಪೌಂಡ್ ನಿರ್ಮಾನ ಕಾಮಗಾರಿ ಆರಂಬವಾಗಿದ್ದು, ಪೊಲೀಸ್ ಬಂದೋಬಸ್ತ್‌ನೊಂದಿಗೆ ಕಾಮಗಾರಿ ಮಂಗಳವಾರ ಆರಂಭವಾಗಿದೆ.
ಮಾಜಿ ಸಫಾಯಿ ಕರ್ಮಚಾರಿಗಳ ಜನಾಂಗಕ್ಕಾಗಿ ರುದ್ರಭೂಮಿ ನಿರ್ಮಾಣ ಮಾಡುವ ಸಲುವಾಗಿ ಕಾಯ್ದಿರಿಸಲಾಗಿದ್ದ 1.20 ಎಕರೆ ಭುಮಿಯನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಇತ್ತೀಚೆಗೆ ಒತ್ತುವರಿ ಮಾಡಿಕೊಂಡ ಜಾಗದಲ್ಲಿರುವ ಶೆಡ್‌ಗಳನ್ನು ತೆರವುಗೊಳಿಸಲಾಗಿತ್ತು.
ಮಂಗಳವಾರ ಕ್ಯಾಶುಟೆಕ್ ಸಂಸ್ಥೆಯಿಂದ ಸರ್ವೆ ನಂ.582ರ 102.24 ಎಕರೆಯಲ್ಲಿರುವ ಬೆಟ್ಟ, 1.20 ಎಕರೆಯಲ್ಲಿರುವ ಸಫಾಯಿ ಕರ್ಮಚಾರಿಗಳ ಜನಾಂಗದ ರುದ್ರಭುಮಿಗಾಗಿ ಕಾಯ್ದಿರಿಸಿದ್ದ ಜಮೀನು ಸೇರಿದಂತೆ ಇತರೆ ಜಮೀನುಗಳನ್ನು ರಕ್ಷಿಸಲು ಜಿಲ್ಲಾಡಳಿತ ಮುಂದಾಗಿದ್ದು, ಮೊದಲ ಹಂತದಲ್ಲಿ 160 ಮೀಟರ್ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೆಟ್ಟ ಸುತ್ತಲೂ ಇರುವ ಪೋರಂ ಪೋಕ ಜಾಗವನ್ನು ರಕ್ಷಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಸರ್ವೆ.582ರಲ್ಲಿ ಸಾಕಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದರಿಂದ ಸಮಾಜದ ಹಲವು ಜನಾಂಗದವರಿಗೆ ರುದ್ರಭುಮಿಗಾಗಿ ಕಾಯ್ದಿರಿಸಲಾಗಿದ್ದ ಭೂಮಿ ಕಣ್ಮರೆಯಾಘುವ ಪರಿಸ್ಥಿತಿ ಉಂಟಾಗಿತ್ತು. ಇದೀಗ ಜಿಲ್ಲಾಡಳಿತದ ಈ ಕ್ರಮಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜಿಲ್ಲೆಯಲ್ಲಿ ಇದೇ ರೀತಿ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗುವುದೇ ಎಂದು ಕಾದು ನೋಡಬೇಕಾಗಿದೆ.
ಇತ್ತೀಚೆಗೆ ಸಫಾಯಿ ಕರ್ಮಚಾರಿಗಳ ಸಭೆಯಲ್ಲಿ ಒತ್ತುವರಿಯಾದ ರುದ್ರಭೂಮಿ ಜಾಗವನ್ನು ತೆರವುಗೊಳಿಸುವಂತೆ ಸಫಾಯಿ ಕರ್ಮಚಾರಿಗಳು ಮನವಿ ಮಾಡಿದ್ದರು. ಅದರಂತೆ ಮುಂದೆ ಮತ್ತೊಮ್ಮೆ ಒತ್ತುವರಿಯಾಗದಂತೆ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಲ್ಲಿದೆ. ನಂತರ ಸಫಾಯಿ ಕರ್ಮಚಾರಿಗಳ ಜನಾಂಗದ ರುದ್ರಭೂಮಿ ಜಾಗವನ್ನು ಆ ಸಮುದಾಯಕ್ಕೆ ಹಸ್ತಾಂತರಿಸಲಾಗುವುದು.
| ನಿತೀಶ.ಕೆ, ಡಿಸಿ ರಾಯಚೂರು.ಒತ್ತುವರಿಯಾದ ಭೂಮಿಯನ್ನು ಸಂರಕ್ಷಿಸಿ, ಮುಂದೆ ಒತ್ತುವರಿಯಾಗದಂತೆ ಜಿಲ್ಲಾಡಳಿತ ಕಾಂಪೌಂಡ್ ನಿರ್ಮಾಣ ಮಾಡಲು ಮುಂದಾಗಿದೆ. ಜಿಲ್ಲೆಯಲ್ಲಿ ಒತ್ತುವರಿಯಾದ ಇತರೆ ಭೂಮಿಯನ್ನು ರಕ್ಷಣೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ.
| ಕೆ.ಇ.ಕುಮಾರ, ನಗರ ನಿವಾಸಿ