ರಾಯಚೂರು:- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಏ.೪ರ(ಗುರುವಾರ) ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮತದಾನದ ಕುರಿತು ಜಾಗೃತಿ ಮುಡಿಸಲು ಜಿಲ್ಲೆಯಲ್ಲಿ ಸಂಚರಿಸಲಿರುವ ಸ್ವೀಪ್ ಟ್ಯಾಬ್ಲೋ(ಸ್ಥಬ್ಧಚಿತ್ರ ಉಳ್ಳ ವಾಹನ)ಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ತುಕಾರಾಮ ಪಾಂಡ್ವೆ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಮಾತನಾಡಿ, ಕಳೆದ ಚುನಾವಣೆಗಳಲ್ಲಿ ಕಡಿಮೆ ಮತನಾವಾಗಿರುವಲ್ಲಿಗೆ ಮತದಾನದ ಕುರಿತು ಹಾಗೂ ಮತದಾನ ಪ್ರಕ್ರಿಯೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಪ್ರಾತ್ಯಕ್ಷತೆಯ ಸ್ಥಬ್ಧಚಿತ್ರ ಸಂಚರಿಸಲಿದ್ದು, ಈ ವಾಹನದ ಮೂಲಕ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಈ ವಾಹನದಲ್ಲಿ ಇವಿಎಂ ಯಂತ್ರದ ಕಂಟ್ರೋಲ್ ಯೂನಿಟ್, ವಿವಿಪ್ಯಾಟ್ ಹಾಗೂ ಬ್ಯಾಲೆಟ್ ಯೂನಿಟ್‌ನ ಸ್ಥಬ್ಧ ಚಿತ್ರವಿದ್ದು, ಈ ವಾಹನದಲ್ಲಿರುವ ಬ್ಯಾಲೆಟ್ ಯೂನಿಟ್‌ನಲ್ಲಿರುವ ಗುಂಡಿಯನ್ನು ಒತ್ತಿದಾಗ ಕಂಟ್ರೋಲ್ ಯೂನಿಟ್‌ನಲ್ಲಿ ಮತದಾನ ಪೂರ್ಣವಾದಂತೆ ಶಬ್ದವಾಗುತ್ತದೆ ಈ ರೀತಿ ವಿನೂತನವಾಗಿರುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮೇ.೭ರಂದು ನಡೆಯುತ್ತಿರುವ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ನೀಡಲಾದ ಮತದಾನದ ಹಕ್ಕನ್ನು ಪಡೆಯಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಗದೀಶ ಗಂಗಣ್ಣನವರ, ನಗರಸಭೆ ಪೌರಾಯುಕ್ತ ಜಿ.ಎನ್ ಚಲಪತಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಡಾ.ಬಿ.ವೈ ವಾಲ್ಮೀಕಿ, ಜಿಲ್ಲಾ ಮತದಾರರ ಸಾಕ್ಷರತಾ ಕ್ಲಬ್‌ನ ದಂಡಪ್ಪ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಟ್ಯಾಬ್ಲೋದ ಮಾರ್ಗ: ಏ.೪ರಿಂದ ಏ.೭ರವರೆಗೆ ರಾಯಚೂರು ನಗರದ ೨೮ ಮತಗಟ್ಟೆಗಲ್ಲಿ, ಏ.೮ರಿಂದ ೧೧ರವಗರೆಗೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ೩೧ಮತಗಟ್ಟೆಗಳಲ್ಲಿ, ಏ.೧೨ರಿಂದ ೧೫ರವರೆಗೆ ದೇವದುರ್ಗ ವಿಧಾನಸಭಾ ಕ್ಷೇತ್ರದ ೧೪ ಮತಗಟ್ಟೆಗಳಲ್ಲಿ, ಏ.೧೬ರಿಂದ ೧೯ರವರೆಗೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ೩೧ ಮತಗಟ್ಟೆಗಳಲ್ಲಿ, ಏ.೨೦ರಿಂದ ೨೩ರವರಗೆ ಸಿಂಧನೂರು ವಿಧಾನಸಭಾ ಕ್ಷೇತ್ರದ ೨೭ ಮತಗಟ್ಟೆಗಳಲ್ಲಿ, ಏ.೨೪ರಿಂದ ೨೭ರವರೆಗೆ ಮಸ್ಕಿ ವಿಧಾನಸಭಾ ಕ್ಷೇತ್ರದ ೧೬ ಮತಗಟ್ಟೆಗಳಲ್ಲಿ, ಏ.೨೮ರಿಂದ ಮೇ.೧ರವರೆಗೆ ಮಾನವಿ ಹಾಗೂ ಸಿರವಾರ ವ್ಯಾಪ್ತಿಯ ೨೬ ಮತಗಟ್ಟೆಗಳಲ್ಲಿ ನಂತರ ಮೇ.೭ರೆವರೆಗೆ ನಗರದಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಸಂಚರಿಸಲಿದೆ.