ರಾಯಚೂರು. ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ನೀಡಿರುವ ಸೂಚನೆಯನ್ನು ಮೀರಿ ನಿವೃತ್ತ ಅಧಿಕಾರಿಗಳ ಸೇವೆಯನ್ನು ಜಿಲ್ಲಾಡಳಿತ ಪಡೆಯುವ ಮೂಲಕ ಸರ್ಕಾರ ಆದೇಶವನ್ನೇ ಕಡೆಗಣಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಳೆದ ಜನವರಿ 9ರಂದು ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಇತರೆ ಇಲಾಖೆಗಳಲ್ಲಿ ಅನಗತ್ಯವಾಗಿ ನಿವೃತ್ತ ನೌಕರ ರನ್ನು ಗುತ್ತಿಗೆ ಆಧಾರದ ಮೇಲೆ ಸಂಪನ್ಮೂಲ ಹಾಗೂ ಇತರೆ ಕೆಲಸ ಕಾರ್ಯಗಳಿಗೆ ನೇಮಿಸಿ ಗೊಳಿಸಿಕೊಂಡಿರುವುದನ್ನು ರದ್ದುಪಡಿಸುವಂತೆ ಸಿಎಂ ಪತ್ರ ಬರೆದ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ರಜನಿಶ್ ಗೋಯಲ್ ಜನವರಿ 23, 2024 ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ, ಪತ್ರ ಬರೆದು ಕೂಡಲೇ ನೇಮಕಗೊಂಡ ನಿವೃತ್ತಗೊಂಡ ನೌಕರರನ್ನು ಬಿಡುಗಡೆಗೊಳಿಸಿ ಅನುಪಾಲನ ವರದಿ ನೀಡುವಂತೆ ಸೂಚಿಸಿದ್ದರು.
ಆದರೆ ಪತ್ರ ಬರೆದು ತಿಂಗಳ ಗತಿಸಿದರೂ ಜಿಲ್ಲಾಡಳಿತ ಮಾತ್ರ ನಿವೃತ್ತ ನೌಕರರ ಸೇವೆ ಯನ್ನು ಮುಂದುವರಿಸುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ನಿರ್ಮಿತಿ ಕೇಂದ್ರದಲ್ಲಿಯೇ ಸಿಎಂ ಆದೇಶ ಉಲ್ಲಂಘನೆ ಯಾಗಿದೆ, ನಿರ್ಮಿತಿ ಕೇಂದ್ರಕ್ಕೆ ವಿಶೇಷ ಅಧಿಕಾರಿ ಯನ್ನಾಗಿ ಗಣಪತಿ ಸಾಕ್ರೆ ಇವರನ್ನು 2023 ಮೇ 18ರಂದು ಜಿಲ್ಲಾಧಿಕಾರಿಗಳು ವಿಶೇಷ ಅಧಿಕಾರಿ ವಾಗಿ ನೇಮಿಸಿ ಪ್ರತಿ ತಿಂಗಳು 60 ಸಾವಿರ ರೂಪಾಯಿ ಗೌರವ ಧನ ಆಧಾರದ ಮೇಲೆ ನೇಮಕ ಮಾಡಿ ಆದೇಶಿಸಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅಭಿಯಂತರರಾಗಿ ಸೇವಾ ನಿವೃತ್ತಿ ಹೊಂದಿದ ಗಣಪತಿ ಸಾಕ್ರೆ ಅವರನ್ನು ಸೇವೆಯಲ್ಲಿ ಮುಂದುವರಿಸಲಾಗಿದೆ. ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ನಿರ್ಮಿತಿ ಕೇಂದ್ರಕ್ಕೆ ವಿಶೇಷ ಅಧಿಕಾರಿ ಯಾಗಿ ಗಣಪತಿ ಸಾಕ್ರೆ ನೇಮಕ ಕಾನೂನು ಬಾಹಿರವಾಗಿದ್ದು ಕೂಡಲೇ ರದ್ದುಗೊಳಿಸುವಂತೆ ಪತ್ರ ಬರೆದರೂ ಸಹ, ಜಿಲ್ಲಾಧಿಕಾರಿಗಳು ಮಾತ್ರ ಗಣಪತಿ ಸಾಕ್ರೆ ಇವರನ್ನು ಬಿಡುಗಡೆಗೊಳಿಸದೇ ಇರುವುದು ಕಾರಣವೇನು ಎಂಬುದು ನಿಗೂಢವಾಗಿದೆ.
ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿರುವಾಗಲೇ ಅನೇಕ ಹಣಕಾಸಿನ ಲೋಪಗಳು ಕುರಿತು ಆರೋಪ ಎದುರಿಸುತ್ತಿರುವ ನಿರ್ಮಿತಿ ಕೇಂದ್ರಕ್ಕೆ ವಿಶೇಷ ಅಧಿಕಾರಿಯಾಗಿ ನೇಮಿಸಿರುವ ಕುರಿತು ಅನೇಕ ಆಕ್ಷೇಪಗಳಿದ್ದರೂ ನೇಮಿಸಲಾಗಿತ್ತು, ಸಿಎಂ, ಮುಖ್ಯ ಕಾರ್ಯದರ್ಶಿಗಳು ಪತ್ರ ಬರೆದು ಸೂಚಿಸಿದ್ದರು, ಅನೇಕ ಇಲಾಖೆಗಳಲ್ಲಿ ನಿವೃತ್ತ ನೌಕರರ ಸೇವೆ ಮುಂದುವರಿಸಲಾಗಿದೆ, ಮಾರ್ಚ್ ಅಂತ್ಯದೊಳಗೆ ವಾರ್ಷಿಕ ಲೆಕ್ಕ ಇತ್ಯರ್ಥ ಪಡಿಸಬೇಕಿರುವುದರಿಂದ ಸರ್ಕಾರ ಆದೇಶವನ್ನು ಸಹ ಮನ್ನಿಸದೆ ನಿವೃತ್ತ ನೌಕರ ಸೇವೆಯಲ್ಲಿ ಮುಂದುವರೆಸುವುದು ಚರ್ಚೆಗೆ ಗ್ರಾಸವಾಗಿದೆ.