ರಾಯಚೂರು.ಬೆಳಗಾವಿ-ಹುನಗುಂದ-ರಾಯಚೂರು ಆರ್ಥಿಕ ಕಾರಿಡಾರ್ ಯೋಜನೆಯ ಎನ್ಹೆಚ್-748ಎ ಮಾರ್ಗವು ಬೆಳಗಾವಿ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಯ ಮೂಲಕ ಹಾದು ಹೋಗುತ್ತದೆ. ಈ ಯೋಜನೆಯ ಅಡಿಯಲ್ಲಿ ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಯ ಪ್ಯಾಕೇಜ್-5 ಮತ್ತು ಪ್ಯಾಕೇಜ್-6ರಲ್ಲಿ ಶೇಕಡಾ 80ರಷ್ಟು ಪ್ರದೇಶದ ಭೂಸ್ವಾಧೀನದ 3ಎ, 3ಡಿ, 3ಜಿ ಮತ್ತು 3ಎಚ್ ಹಂತಗಳ ಪ್ರಕ್ರಿಯೆಯು ಮುಗಿದಿದ್ದು, ಪರಿಹಾರ ವಿತರಣೆಯನ್ನು ಬಾಗಲಕೋಟೆ ಮತ್ತು ರಾಯಚೂರಿನ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಬೆಳಗಾವಿ-ಹುನಗುಂದ-ರಾಯಚೂರು(ಇಸಿ-10 ಹೈದರಾಬಾದ್-ಪಣಜಿ ಎನ್ಹೆಚ್ ಸಂಖ್ಯೆ 748ಎ) ಮಾರ್ಗದ ನಾಲ್ಕು ಪಥ ನಿರ್ಮಾಣಕ್ಕಾಗಿ ಕಿಮೀ 182+300 ರಿಂದ ಕಿಮೀ 273+400ವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದೇ ನ.21ರಂದು ನೇಮಕಿತ ದಿನಾಂಕವನ್ನು ಘೋಷಿಸಿದೆ. ಎಲ್ಲಾ ಗುತ್ತಿಗೆದಾರರು ತಕ್ಷಣವೇ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. ಹಾಗಾಗಿ ಈ ಸೂಚನೆಯ ಮೂಲಕ ಭೂ ಮಾಲೀಕರು ರಾಷ್ಟ್ರೀಯ ಹೆದ್ದಾರಿ ಕಾಯ್ದೆ, 1956ರ ಅಡಿಯಲ್ಲಿ ಸ್ವಾಧೀನಗೊಳಿಸಲಾದ ಭೂಮಿಯಲ್ಲಿ ಬೆಳೆಗಳನ್ನು ಬೆಳೆಸದೆ, ಸ್ವಾಧೀನಗೊಳಿಸಲಾದ ಭೂಮಿಯನ್ನು ಖಾಲಿ ಮಾಡಿಕೊಡಬೇಕಾಗಿದೆಂದು ಕೋರಿದ್ದಾರೆ.
3ಡಿ ಐತೀರ್ಪು (ಭೂಸ್ವಾಧೀನ ಘೋಷಣೆ) ಪ್ರಕಟಣೆಯ ನಂತರ, ಸ್ವಾಧೀನಗೊಳಗಾದ ಭೂಮಿಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಸ್ವತ್ತು ಆಗಿರುತ್ತದೆ. ಈ ಯೋಜನೆಯು ರಾಯಚೂರು ಜಿಲ್ಲೆಯ ಜೀವನಾಡಿಯಾಗಿದೆ. ಮತ್ತು ಹೈದರಾಬಾದ್, ರಾಯಚೂರು ಹಾಗೂ ಬೆಳಗಾವಿ ನಡುವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಮೂಲಕ ಸ್ಥಳೀಯ ಸಾರ್ವಜನಿಕರಿಗೆ ತುಂಬಾ ಅನುಕೂಲಕರವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.