ರಾಯಚೂರು. ಮುನ್ನೆಚ್ಚರಿಕೆ ಕ್ರಮಗಳು ಅನುಸರಿಸಬೇಕು ಹಾಗೂ ಸೂಕ್ತ ತಿಳಿವಳಿಕೆ ಮೂಲಕ ಮಾರಣಾಂತಿಕ ಎಚ್‌ಐವಿ ಕಾಯಿಲೆಯನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಎದುರು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೂಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವಜನೋತ್ಸವ-2024ರ ಅಂಗವಾಗಿ ಜಿಲ್ಲಾ ಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆಗೆ ಚಾಲನೆ ನೀಡಿ, ಮಾತನಾಡಿದರು.
ಅಜ್ಞಾನ ಹಾಗೂ ಅಸುರಕ್ಷಿತ ಲೈಂಗಿಕ ಕ್ರಿಯೆಗಳಿಂದ ಎಚ್‌ಐವಿ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಈ ಸೋಂಕಿಗೆ ಒಳಗಾದ ವ್ಯಕ್ತಿಗೆ ಬಳಸಿದ ಚುಚ್ಚು ಮದ್ದುಗಳ ಮರು ಬಳಕೆಯಿಂದ, ರಕ್ತದ ಮೂಲಕ ಮತ್ತು ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಸೋಂಕು ಹರಡುತ್ತದೆ. ವಿದ್ಯಾರ್ಥಿಗಳು ಉತ್ತಮ ಶರೀರ ಹಾಗೂ ಆರೋಗ್ಯದಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಜಾಲಹಳ್ಳಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗೆ ಪ್ರಥಮ ಸ್ಥಾನ; ಯುವಜನೋತ್ಸವ-2024ರ ಅಂಗವಾಗಿ ಜಿಲ್ಲಾ ಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆಯನ್ನು ನಗರದ ಟ್ಯಾಗೋರ್ ಸ್ಮಾರಕ ಪ್ರೌಢ ಶಾಲೆಯಿಂದ ನಗರದ ಅತಿಥಿ ಹೋಟೆಲ್‌ವರಿಗೆ 5 ಕಿ.ಮಿ ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ನಿಂಗರಾಜ್ ದೇಸಾಯಿ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ತಾಯ್ಯಪ್ಪ, ತೃತೀಯ ಸ್ಥಾನ ತಿಮ್ಮಪ್ಪ ಹಾಗೂ ಮಹಿಳಾ ವಿಭಾಗದಲ್ಲಿ ನಾಗಶ್ರೀ ಪ್ರಥಮ ಸ್ಥಾನ, ಶಿರಿಷಾ ದ್ವಿತೀಯ ಸ್ಥಾನ, ಆಸ್ಮಿಲ್ಲಾ ತೃತೀಯ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡಿ, ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣಾಧಿಕಾರಿಗಳಾದ ಡಾ.ಶಾಕೀರ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಂತೋಷ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಂಗಸ್ವಾಮಿ, ಎನ್.ಎಚ್.ಭಾಷಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಮ್ಯಾರಥಾನ್ ಓಟ ಸ್ಪರ್ಧೆಯಲ್ಲಿ ಇದ್ದರು.