ರಾಯಚೂರು: ಕರ್ನಾಟಕ ಮತ್ತು ತೆಲಂಗಾಣ ರಾಜ್ಯದ ಗಡಿ ಭಾಗವಾದ ಶಕ್ತಿನಗರದ ಕೃಷ್ಣಾ ಸೇತುವೆ ಸಂಪೂರ್ಣವಾಗಿ ಶಿಥೀಲಾವಸ್ಥೆಯಲ್ಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈ ಸೇತುವೆ ದುರಸ್ತಿ ಕಾರ್ಯ ಕೈಗೊಳ್ಳುವ ಸಲುವಾಗಿ ಜ.10ರ ಬೆಳಿಗ್ಗೆ 5:00 ಗಂಟೆಯಿಂದ 45 ದಿನಗಳ ವರೆಗೆ ತಾಲೂಕಿನ ಶಕ್ತಿನಗರದ ಕೃಷ್ಣಾ ಸೇತುವೆಯ ಮಾರ್ಗವಾಗಿ ವಾಹನ ಸಂಚಾರವನ್ನು ನಿಷೇಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಉಪಾ ಅಧೀಕ್ಷಕ ಸತ್ಯ ನಾರಾಯಣರಾವ್ ಅವರು ಹೇಳಿದರು.
ಅವರು ಜ.6ರಂದು ತಾಲೂಕಿನ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಕೃಷ್ಣಾ ಸೇತುವೆಯ ದುರಸ್ತಿ ಕಾಮಗಾರಿ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಯಚೂರು ಹೈದ್ರಾಬಾದ್ ರಾಷ್ಟ್ರೀಯ ಹೆದ್ದಾರಿ 167ರ ಮಾರ್ಗದಲ್ಲಿರುವ ಕೃಷ್ಣಾ ಸೇತುವೆ ಸಂಪೂರ್ಣವಾಗಿ ಶಿಥೀಲಾವಸ್ಥೆ ಹಂತದಲ್ಲಿದ್ದು, ಈ ಮಾರ್ಗವಾಗಿ ದೊಡ್ಡ ದೊಡ್ಡ ವಾಹನಗಳು ಓಡಾಡುವುದರಿಂದ ಸೇತುವೆ ಮತ್ತಷ್ಟು ಹಾಳಾಗುವ ಸಂಭವವವಿದ್ದು ಇದರಿಂದ ಯಾವುದೇ ಘಟನೆಗಳು ಜರುಗಬಹುದಾಗಿದ್ದು, ಮುಂಜಾಗೃತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಸೇತುವೆ ದುರಸ್ತಿ ಕಾರ್ಯ ಮುಗಿಯುವವರೆಗೂ ಸೇತುವೆ ಮೇಲೆ ವಾಹನ ಸಂಚಾರವನ್ನು ನಿಷೇಧಿಸಲಾಗುವುದು. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚಿಸಿ ಮಾರ್ಗ ಬದಲಾವಣೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಕೃಷ್ಣಾ ಸೇತುವೆ ಹಾಳಾಗಿದ್ದರಿಂದ ವಾಹನಗಳು ಸೇತುವೆ ಮಧ್ಯ ಭಾಗದಲ್ಲಿ ಕೆಟ್ಟು ನಿಂತು ಗಂಟೆಗಟ್ಟಲೇ ವಾಹನ. ಸಂಚಾರದಲ್ಲಿ ವ್ಯತ್ಯ ಉಂಟಾಗುತ್ತಿತ್ತುಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು ಈ ಸಮಸ್ಯೆಯನ್ನು ಪರಿಹರಿಸಲು ಸೇತುವೆಗೆ ವೇರ್ ಕೋಟ್ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದರಬಜಾರ ಪೊಲೀಸ್ ಠಾಣೆಯ ಸಿಪಿಐ ಗುರುರಾಜ ಕಟ್ಟಿಮನಿ, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಾಬಯ್ಯ, ಪಿಡಬ್ಲ್ಯೂಡಿ ಇಇ ಶಂಕರ, ಮಾರ್ಕೇಟ್ ಯಾರ್ಡ್ ಪಿಎಸ್ಐ ಅನಿತಾ, ಪ್ರಾದೇಶಿಕ ಸಾರಿಗೆ ಇಲಾಖೆಯ ಎಸ್.ಸಿ ನಾಗವಂದ, ಸೈದಾಪೂರ ಪಿಎಸ್ಐ ವಿನಾಯಕ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಡಿಟಿಓ ಚಂದ್ರಶೇಖರ, ರಾಯಚೂರು ಸಾರಿಗೆ ಘಟಕ 2ರ ವ್ಯವಸ್ಥಾಪಕ ವೆಂಕಟೇಶ, ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು, ತೆಂಗಾಣದ ಪೊಲೀಸರು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.