ರಾಯಚೂರು.ರಾಯಚೂರು ಲೋಕಸಭಾ ಸಾರ್ವತ್ರಿಕ ಚುನಾವಣೆ 2024ನ್ನು ಮುಕ್ತ, ನ್ಯಾಯಸಮ್ಮತವಾಗಿ ನಡೆಸ ಲು ಮತ್ತು ಅಕ್ರಮ ಚಟುವಟಿಕೆಗಳ ದೂರು ದಾಖಲು ಮಾಡಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಈಗಾಗಲೇ ಕಾರ್ಯಪ್ರವೃತ್ತ ರಾಗಿರುವ ಚುನಾವಣಾ ದೂರು ನಿಯಂತ್ರಣ ಕೊಠಡಿ, ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಸಾಮಾನ್ಯ ವೀಕ್ಷಕರಾದ ಅಜಯ್ ಪ್ರಕಾಶ ಹಾಗೂ ಪೊಲೀಸ್ ವೀಕ್ಷಕರಾದ ಡಾ.ಸತೀಶ ಕುಮಾರ ಅವರು ಭಾನುವಾರ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಚುನಾವಣಾ ಅಕ್ರಮಗಳಿಗೆ ಸಂಬಂಧಿ ಸಿದಂತೆ ಸಿ- ವಿಜಿಲ್ ಮೂಲಕ ಸಲ್ಲಿಕೆಯಾಗಿರುವ ದೂರುಗಳ ಮಾಹಿತಿ ಪಡೆದುಕೊ೦ಡರು. ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಸೂಚಿಸಿದರು.
ಬಳಿಕ ಮಾಧ್ಯಮ ಪ್ರಮಾಣೀಕರಣ ಮತ್ತು ನಿಗಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣೆ ಅಕ್ರಮ, ಕಾಸಿಗಾಗಿ ಸುದ್ದಿ ಹಾಗೂ ಇತರೆ ವಿಷಯಗಳ ಕುರಿತು ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುವುದನ್ನು ಹದ್ದಿನ ಕಣ್ಣಿನಂತೆ ನಿಗಾವಹಿಸಬೇಕು ಎಂದು ಎಂಸಿಎಂಸಿ ಸಮಿತಿಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
ಸ್ಥಳೀಯ ಸುದ್ದಿಚಾನೆಲ್ ಗಳು, ಜಿಲ್ಲೆಯಲ್ಲಿರುವ ಯೂಟ್ಯೂಬ್ ಸುದ್ದಿ ಚಾನೆಲ್ ಗಳ ಮೇಲೆ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಚುನಾವಣಾ ಅಕ್ರಮಗಳ ಸುದ್ದಿಗಳು, ಮಾದರಿನೀತಿ ಸಂಹಿತೆ ಉಲ್ಲಂಘನೆ ವಿಚಾರಗಳು ಸೇರಿದಂತೆ ಇನ್ನಿತರ ಚಟುವಟಿಕೆಗಳ ಮೇಲು ನಿಗಾ ವಹಿಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಎಸ್.ಎಸ್ ಸಂಪಗಾವಿ, ರಾಯಚೂರು ತಹಶೀಲ್ದಾರ ಸುರೇಶ ವರ್ಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.