ರಾಯಚೂರು- ಭಾರತ ಚುನಾವಣೆ ಆಯೋಗ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗಳ ನಿರ್ದೇಶನದಂತೆ ಸಾರ್ವತ್ರಿಕ ಲೋಕಸಭೆ ಚುನಾವಣೆ-೨೦೨೪ರ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆ ಹಾಗೂ ಇನ್ನಿತರ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಜಿಲ್ಲಾ ಚುನಾವಣಾಧಿಕಾರಿಗಳ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಾದರಿ ನೀತಿ ಸಂಹಿತೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎಲ್.ಚಂದ್ರಶೇಖರ ನಾಯಕ ಅವರು ತಿಳಿಸಿದ್ದಾರೆ.
೫೩-ರಾಯಚೂರು ಗ್ರಾಮೀಣ, ೫೪-ರಾಯಚೂರು ನಗರ, ೫೫-ಮಾನವಿ, ೫೬-ದೇವದುರ್ಗ, ೫೭-ಲಿಂಗಸುಗೂರು, ೫೮-ಸಿಂಧನೂರು ಹಾಗೂ ೫೯- ಮಸ್ಕಿ ವಿಧಾನಸಭೆ ವ್ಯಾಪ್ತಿಗೆ ಬರುವ ಮತದಾರರು ಚುನಾವಣೆಗೆ ಸಂಬಂಧಿಸಿದಂತೆ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮಾದರಿ ನೀತಿ ಸಂಹಿತೆ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಅದರ ದೂರವಾಣಿ ಸಂಖ್ಯೆ: ೦೮೫೩೨-೨೨೫೦೦೧ ಇದ್ದು, ಈ ಸಂಖ್ಯೆಗೆ ಕರೆ ಮಾಡಿ ಸಾರ್ವಜನಿಕರು ಅಹವಾಲು, ಮನವಿಯನ್ನು ಸಲ್ಲಿಸಬಹುದಾಗಿದೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.