ರಾಯಚೂರು: ಡಿ.20 ಸಿರವಾರ ತಾಲೂಕಿನ ಚಾಗಬಾವಿ ಗ್ರಾಮದಲ್ಲಿ ಪಿ.ಆರ್.ಇ.ಡಿ.ವತಿಯಿಂದ ಅನುಷ್ಠಾನಗೊಳಿಸುತ್ತಿರುವ ದ್ರವ ತ್ಯಾಜ್ಯ ವಿಲೇವಾರಿ ಹಾಗೂ ಚರಂಡಿ ಕಾಮಗಾರಿಯು ವೈಜ್ಞಾನಿಕವಾಗಿ ಕೂಡಿರಬೇಕು ಹಾಗೂ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಿ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ರವರು ಅಭಿಯಂತರರಿಗೆ ಸೂಚಿಸಿದರು. ಅವರು ಶುಕ್ರವಾರ ಸಿರವಾರ ತಾಲೂಕಿನ ಚಾಗಬಾವಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿ ನಿರ್ದೇಶನ ನೀಡಿದರು.
ಗ್ರಾಮದಲ್ಲಿ ಸ್ವಚ್ಚತಾ ಕಾಪಾಡಲು ಅಗತ್ಯ ಕ್ರಮ ಜರುಗಿಸಬೇಕು, ಗ್ರಾಮಸ್ಥರಿಗೆ ಶುದ್ಧ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಬೇಕು, ನೀರು ಪೋಲಾಗದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಗ್ರಾಮ ಪಂಚಾಯತಿಯಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಲಾ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಣೆ ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಖಾತಾ ವಿತರಣೆ ಮಾಡುವುದನ್ನು ಪರಿಶೀಲಿಸಿದರು. ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಕಸವಿಲೇವಾರಿ ಮಾಡಲು ಕಸದ ವಾಹನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಹಾಗೂ ಮಹಿಳಾ ಚಾಲಕರ ಸೇವೆಪಡೆದು ನಿರ್ವಹಿಸಲು ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಶೀಧರ್ ಸ್ವಾಮಿ, ನರೇಗಾ ಸಹಾಯಕ ನಿರ್ದೇಶಕರಾದ ಮಂಜುನಾಥ ಜಾವೂರ್, ಪಿ.ಆರ್.ಇ.ಡಿ ಎಇಇ, ಟಿಎಇ ಹಾಗೂ ನರೇಗಾ ಸಿಬ್ಬಂದಿ ಮತ್ತು ಗ್ರಾ.ಪಂ.ಸಿಬ್ಬಂದಿ ಇದ್ದರು.