ಸಿರವಾರ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಚಿರತೆ ದಾಳಿಗೆ ಎರಡು ಮೇಕೆಗಳು ಬಲಿಯಾಗಿದೆ. ಗ್ರಾಮದ ದಿನ್ನಿ ರಸ್ತೆಯಲ್ಲಿರುವ ಬಂಡಿ ಮೊಹಮ್ಮದ್ ಎಂಬುವವರಿಗೆ ಸೇರಿದ ಮೇಕೆಗಳು ಎಂದಿನಂತೆ ದೊಡ್ಡಿಯಲ್ಲಿದ್ದ ವೇಳೆ ಮೇಕೆಗಳ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದೆ. ಮೇಕೆಗಳ ಚೀರಾಟ ಕಂಡು ಮಾಲೀಕರು ದೊಡ್ಡಿ ಬಳಿ ಬಂದು ನೋಡಿದಾಗ ಎರಡು ಚಿರತೆಗಳು ಓಡಿ ಹೋಗಿವೆ ಎಂದು ಪ್ರತ್ಯಕ್ಷ ದರ್ಶಿ ಮೇಕೆ ಮಾಲೀಕ ಬಂಡಿ ಮೊಹ್ಮದ್ ತಿಳಿಸಿದ್ದಾರೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.
ಸುದ್ದಿ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಚಿರತೆ ಇರುವುದು ಖಚಿತ ಪಡಿಸಿದ್ದಾರೆ. ಇದೀಗ ಚಿರತೆಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ಒಂದು ಕಡೆ ಬೋನ್ ಅಳವಡಿಸಿದ್ದಾರೆ.
ನಿರ್ಲಕ್ಷ್ಯ ಆರೋಪ: ಇನ್ನೂ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸುರೇಶ ಆಲಮೇಲ ಅವರು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬುದು ಪ್ರಜ್ಞಾವಂತರ ಆರೋಪವಾಗಿದೆ. ಈ ಹಿಂದೆ ಇದ್ದ ರಾಜೇಶ ಅವರು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಹಗಲು ರಾತ್ರಿ ಎನ್ನದೇ ಅದೇ ಸ್ಥಳದಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ, ಸುರೇಶ ಅವರು ಮಾತ್ರ ಯಾವುದೇ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಕಳೆದ ವರ್ಷ ಕೂಡಾ ಇದೇ ಗ್ರಾಮದಲ್ಲಿ ಚಿರತೆ ದಾಳಿಗೆ ಹಸು ಬಲಿಯಾಗಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ.
ಈಗಲಾದರೂ ಅರಣ್ಯ ಅಧಿಕಾರಿಗಳು ಎಚ್ಚೆತ್ತುಕೊಂಡು ಚಿರತೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.