ರಾಯಚೂರು. ಮುಂಗಾರು, ಹಿಂಗಾರು ಮಳೆ ಕೊರತೆಯಿಂದ ರೈತರಿಗೆ ಬೆಳೆ ನಷ್ಟದ ಭೀತಿಯ ನಡುವೆ ಹತ್ತಿಯ ದರ ಕುಸಿತ ಸಂಕಷ್ಟಕ್ಕೆ ದೂಡಿದೆ.
ದೇಶದಲ್ಲಿಯೇ ಅತ್ಯಂತ ದೊಡ್ಡ ಹತ್ತಿ ಮಾರುಕಟ್ಟೆಯಾದ ರಾಯಚೂರು ಕೃಷಿ ಉತ್ಪನ್ನ ಹತ್ತಿ ಮಾರುಕಟ್ಟೆಯಲ್ಲಿ ನೂರಾರು ಸಂಖ್ಯೆಯಲ್ಲಿ ಹತ್ತಿಯ ಗಾಡಿಗಳು ಬರುತ್ತಿವೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮಾತ್ರವಲ್ಲದೇ ರಾಯಚೂರು ಆಂಧ್ರಪ್ರದೇಶ, ತೆಲಂಗಾಣ ಗಡಿಭಾಗಕ್ಕೆ ಹೊಂದಿಕೊಂಡ ಕಾರಣ ಎರಡು ರಾಜ್ಯಗಳಿಂದ ನೂರಾರು ಸಂಖ್ಯೆಯಲ್ಲಿ ಹತ್ತಿಯ ವಾಹನಗಳು ಎಪಿಎಂಸಿಗೆ ಬರುತ್ತಿವೆ. ಕಳೆದ ವರ್ಷ ಕ್ವಿಂಟಲ್ ಗೆ ₹8,500 ರಿಂದ ₹9000ವರೆಗೆ ಇದ್ದ ಹತ್ತಿ ದರ ಈ ಬಾರಿ ಕ್ವಿಂಟಲ್ ಗೆ ಕೇವಲ ₹6,800ರಿಂದ ₹7,300 ವರೆಗೆ ಇದೆ.
ಒಂದೆಡೆ ಮಳೆ ಕೊರತೆಯಿಂದ ಹತ್ತಿಯ ಇಳುವರಿ ಕಡಿಮೆಯಾಗಿದ್ದು ಮತ್ತೊಂದೆಡೆ ಕಡಿಮೆ ದರ ಇರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹತ್ತಿ ಮಾರುಕಟ್ಟೆಯಲ್ಲಿ ರೈತರಿಂದ ಖರೀದಿಸಿ ನಂತರ ಹತ್ತಿ ಗಿರಣಿಗಳಿಗೆ ಹೋದ ಬಳಿಕ ಹತ್ತಿ ಖರೀದಿದಾರರು ಕ್ವಿಂಟಾಲ್ ಗೆ ₹200 ರಿಂದ ₹300 ದರ ಕಡಿತಗೊಳಿಸುತ್ತಿದ್ದಾರೆ. ರೈತರು ಇದನ್ನು ಪ್ರಶ್ನಿಸಿದರೆ ಹತ್ತಿ ವಾಪಸ್ಸು ತೆಗೆದುಕೊಂಡು ಹೋಗಿ ಎಂದು ಉಡಾಫೆಯಾಗಿ ಮಾತನಾಡುತ್ತಾರೆ ಎಂದು ರೈತರು ಅಳಲು ತೋಡಿಕೊಂಡರು.