ಬೆಂಗಳೂರು.ರಾಯಚೂರು ನಗರದಲ್ಲಿ ಬೀದಿ ದೀಪಗಳ ಅಳವಡಿಕೆ, ನಿರ್ಮಾಣವಾಗಿರುವ ಓವರ್ ಹೆಡ್ ಟ್ಯಾಂಕ್‌ಗಳಿಂದ ನೀರು ಸರಬರಾಜು ಹಾಗೂ ಮಾವಿನಕೆರೆಯ ಬಳಿ ಎಸ್‌ಟಿಪಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಗಳನ್ನು ಚುರುಕುಗೊಳಿಸುವಂತೆ *ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು
ವಿಕಾಸಸೌಧದಲ್ಲಿ ನಗರಾಭಿವೃದ್ದಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಯಚೂರು ಮತ್ತು ಮಾನ್ವಿ ನಗರಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು ಮತ್ತು ಬೀದಿ ದೀಪಗಳ ಬಗ್ಗೆ ಕೂಲಂಕುಷವಾಗಿ ಚರ್ಚಿಸಿದರು.
ನಗರದ ಹಲವಾರು ವಾರ್ಡ್‌ಗಳಲ್ಲಿ ಇನ್ನೂ ವರೆಗೂ ಬೀದಿದೀಪಗಳನ್ನು ಸಮರ್ಪಕವಾಗಿ ಅಳವಡಿಸಲಾಗಿಲ್ಲ. ಇದರಿಂದ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಗಮನ ಸೇಳೆಯಲಾಗಿದೆ. ಆದರೂ ಕೆಲವು ಆಡಳೀತಾತ್ಮಕ ಕಾರಣಗಳಿಂದ ಇವುಗಳ ಅಳವಡಿಕೆ ಕಾರ್ಯ ಪ್ರಾರಂಭವಾಗಿಲ್ಲ. ಈ ಕಾರ್ಯವನ್ನು ಪ್ರಾರಂಭಿಸುವಲ್ಲಿ ಇರುವಂತಹ ಅಡೆತಡೆಗಳ ನಿವಾರಿಸಬೇಕು ಹಾಗೂ ಅಳವಡಿಕೆಯ ಕಾರ್ಯ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಸಚಿವರಾದ ಎನ್ ಎಸ್ ಭೋಸರಾಜು ಮತ್ತು ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿಗಳು ಸೂಚನೆ ನೀಡಿದರು.
ರಾಯಚೂರು ನಗರದಲ್ಲಿ 7 ಮತ್ತು ಮಾನ್ವಿಯಲ್ಲಿ 1 ಓವರ್ ಹೆಡ್ ಟ್ಯಾಂಕನ್ನು ನಿರ್ಮಿಸಲಾಗಿದೆ. ಇವುಗಳನ್ನು ನಿರ್ಮಿಸಿ ಈಗಾಗಲೇ 06 ವರ್ಷಗಳು ಕಳೆದಿದ್ದರೂ ಅಲ್ಲಿನಿಂದ ನೀರು ಸರಬರಾಜು ಪ್ರಾರಂಭವಾಗಿಲ್ಲ. ಈ ಬಗ್ಗೆ ನಗರಾಭಿವೃದ್ದಿ ಇಲಾಖೆ ಅಧಿಕಾರಿಗಳು ಇಚ್ಚಾಸಕ್ತಿಯನ್ನು ತೋರಿಸದೇ ಇರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಈ ಬಗ್ಗೆ ಒಂದು ಜುಲೈ 1 ರ ಒಳಗಾಗಿ ಕಾರ್ಯ ಸಾಧ್ಯತಾ ವರದಿಯನ್ನು ನೀಡುವಂತೆ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ನಗರದ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಬೇಕು. ಇದೇ ವೇಳೆ, ಮಾವಿನ ಕೆರೆಗೆ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿರುವುದನ್ನ ತಪ್ಪಿಸಲು ಎಸ್‌ಟಿಪಿ ನಿರ್ಮಾಣಕ್ಕೆ ಕ್ರಿಯಾ ಯೊಜನೆ ರೂಪಿಸುವಂತೆ ಸೂಚಿಸಲಾಯಿತು.
ರಾಯಚೂರು ನಗರದ ಒಳಭಾಗದಲ್ಲಿ ಹೆಚ್ಚಾಗಿ ಅಕ್ಕಿಮಿಲ್‌ಗಳಿದ್ದು, ಈ ಕೈಗಾರಿಕೆಗಳಿಗೆ ನೀರಿನ ಅವಶ್ಯಕತೆ ಹೆಚ್ಚಾಗಿದೆ. ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆ ಅಧಿಕಾರಿಗಳು, ಕರ್ನಾಟಕ ಅರ್ಬನ್ ವಾಟರ್ ಬೋರ್ಡ್ ಹಾಗೂ ನಗರಸಭೆಯ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯಸಾಧ್ಯತಾ ಯೋಜನೆ ರೂಪಿಸಬೇಕು. ಗದ್ವಾಲ್ ಮತ್ತು ಮನ್ಸಲಾಪುರ್ ಪ್ರದೇಶದಲ್ಲಿರುವ ಕೈಗಾರಿಕೆಗಳಿಗೆ ನೀರು ಸರಬರಾಜು ಮಾಡುಲು ಕ್ರಮ ಕೈಗೊಳ್ಳೂವಂತೆ ಸೂಚನೆ ನೀಡಿದರು.
ಸ್ವಚ್ಚತಾ ಕಾರ್ಯಗಳಿಗೆ ಬಳಸಿಕೊಳ್ಳಲು ತಾತ್ಕಾಲಿಕವಾಗಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮೋದನೆ ನೀಡಲಾಗಿದೆ. ಇವರನ್ನು ಬಳಸಿಕೊಂಡು ಮಳೆಗಾಲ ರಾಯಚೂರು ನಗರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಯಿತು.
ಸಭೆಯಲ್ಲಿ, ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ದೀಪಾ ಚೋಳನ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಹವಳಿಕಟ್ಟಿ, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮಿಕಾಂತ ರೆಡ್ಡಿ, ಕೆಯುಡಬ್ಲೂಎಸ್ ವ್ಯವಸ್ಥಾಪಕ ನಿರ್ದೇಶಕರಾದ ಶರತ್, ನಗರಸಭೆ ಆಯುಕ್ತರಾದ ಗುರುಸಿದ್ದಯ್ಯ, ಯೋಜನಾ ನಿರ್ದೇಶಕರಾದ ಜಗದೀಶ್ ಗಂಗಣ್ಣನವರು, ಕೈಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಬಸವರಾಜ ಯಂಕಂಬಿ, ಆರ್‌ಯುಡಿಎ ಆಯುಕ್ತರಾದ ಮೆಹಬೂಬ ಜೀಲಾನಿ ಸೇರಿದಂತೆ ಕೆಯುಡಬ್ಲೂಎಸ್‌ಡಿಬಿ, ಕೆಯುಐಡಿಎಫ್‌ಸಿ, ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.