Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಳ ಹಿನ್ನೆಲೆ: ಮಿತ ಬಳಕೆ ಅಧ್ಯಯನಕ್ಕೆ 10 ತಂಡ ರಚನೆ -ಕೆ.ನಾಗಣ್ಣಗೌಡ

ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಳ ಹಿನ್ನೆಲೆ: ಮಿತ ಬಳಕೆ ಅಧ್ಯಯನಕ್ಕೆ 10 ತಂಡ ರಚನೆ -ಕೆ.ನಾಗಣ್ಣಗೌಡ

ಕಲಬುರಗಿ : ಇತ್ತೀಚಿಗೆ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು ಇದರಿಂದ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾರೆ. ಮೊಬೈಲ್ ಕೋರೊನಾ ಗಿಂತ ಡೇಂಜರ್ ಆಗಿ ಮಾರ್ಪಟ್ಟಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಕಡಿಮೆಯಾಗಿದೆ. ಮಕ್ಕಳು ಮೊಬೈಲ್ ಬಳಕೆ ಮಿತವಾಗಿ ಬಳಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಲು ಆಯೋಗವು 10 ತಂಡ ರಚಿಸಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರ್.ಟಿ.ಇ, ಪೋಕ್ಸೋ, ಬಾಲ ನ್ಯಾಯ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನೆ ಸಭೆ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ತಂಡದಲ್ಲಿ ವೈದ್ಯರು, ಮಕ್ಕಳ, ಪಾಲಕರು, ಸೈಕ್ಯಾಟ್ರಿಸ್ಟ್ ಇರಲಿದ್ದು ಮೂರು ತಿಂಗಳ ಕಾಲ ರಾಜ್ಯದಾದ್ಯಂತ ಅಧ್ಯಯನ ಮಾಡಿ ವರದಿ ಸಲ್ಲಿಸಲಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಇತ್ತೀಚೆಗೆ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪಾಠದ ಜೊತೆಗೆ ಆಟ, ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ  ನಿರ್ದೇಶನ ನೀಡಲಾಗಿದೆ ಎಂದರು.
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಆತ್ಮ ರಕ್ಷಣೆ ಮತ್ತು ಸುರಕ್ಷತೆ ನಿಟ್ಟಿನಲ್ಲಿ ಶಾಲಾ ಕಾಲೇಜು, ವಸತಿ ನಿಲಯದಲ್ಲಿನ ಮಕ್ಕಳಿಗೆ ತರಬೇತಿ ನೀಡಲು 300 ತರಬೇತಿದಾರರನ್ನು ಆಯ್ಕೆ ಮಾಡಿಕೊಂಡಿರುವುದು ಉತ್ತಮ ನಡೆಯಾಗಿದೆ ಎಂದ ಅವರು, ಆಟೋ ಶಾಲಾ ಬಸ್ ಗಳಲ್ಲಿ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕರೆದೊಯ್ಯದಂತೆ ಆರ್.ಟಿ.ಓ ಮತ್ತು ಸಂಚಾರಿ ಪೊಲೀಸರು ನಿಯಂತ್ರಣ ಹಾಕಬೇಕು. ಇನ್ನು 18 ವರ್ಷದೊಳಗಿನ ಮಕ್ಕಳು ಬೈಕ್ ನಡೆಸದಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಸಮರ್ಪಕ ಬಸ್ ಇಲ್ಲದೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆಗೆ ಹೋಗಲು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಪತ್ರಕರ್ತ ಪ್ರಶ್ನೆಗೆ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಉತ್ತರಿಸಿ, ಇಂತ ಯಾವುದೇ ಪ್ರಕರಣ ಕಂಡುಬಂದಿದ್ದಲ್ಲಿ ಆಯೋಗವು ಸ್ವಯಂ ಪ್ರಕರಣ ದಾಖಲಿಸು ಕೊಂಡು ಕ್ರಮ ಕೈಗೊಳ್ಳಲಿದೆ. ಮುಂದುವರೆದು ಇದಕ್ಕೆ ಅವಕಾಶ ನೀಡದಂತೆ ಕೆ.ಕೆ.ಆರ್.ಟಿ.ಸಿ. ಎಂ.ಡಿ. ಅವರು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಮಕ್ಕಳಿಗೆ ಪ್ರತ್ಯೇಕ ಬಸ್, ಶಿಕ್ಷಣ ಸಚಿವರೊಂದಿಗೆ ಚರ್ಚೆ:- ಶಕ್ತಿ ಯೋಜನೆಯಿಂದ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳ ಪ್ರಯಾಣ ಸಂಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಲಾ ಮಕ್ಕಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬಹುದೇ ಎಂದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು, ಈ ಕುರಿತು ಶಿಕ್ಷಣ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚಿಸುವೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ.ಫೌಜಿಯಾ ತರನ್ನುಮ್ ಇದ್ದರು.

Megha News