Live Stream

March 2025
S M T W T F S
 1
2345678
9101112131415
16171819202122
23242526272829
3031  

| Latest Version 9.4.1 |

State News

ದೇಶದ ಸರಾಸರಿ ಜಿಎಸ್‌ಡಿಪಿಗಿಂತ ಏರುಗತಿಯಲ್ಲಿ ಕರ್ನಾಟಕದ ಆರ್ಥಿಕ ಪ್ರಗತಿ

ದೇಶದ ಸರಾಸರಿ ಜಿಎಸ್‌ಡಿಪಿಗಿಂತ ಏರುಗತಿಯಲ್ಲಿ ಕರ್ನಾಟಕದ ಆರ್ಥಿಕ ಪ್ರಗತಿ

ಬೆಂಗಳೂರು, ಸೆ.21: ಕರ್ನಾಟಕ ರಾಜ್ಯ ಆರ್ಥಿಕ ಪ್ರಗತಿಯಲ್ಲಿ ದೇಶದಲ್ಲೇ ಉತ್ತಮ ಸಾಧನೆ ಮಾಡಿದ್ದು, 2023-24 ನೇ ಹಣಕಾಸು ಸಾಲಿನಲ್ಲಿ ಶೇ.10.2ರಷ್ಟು ಜಿಎಸ್‌ಡಿಪಿ ಪ್ರಗತಿ ಸಾಧಿಸಿದೆ.

ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ ಈ ಅವಧಿಯಲ್ಲಿ ದೇಶದ ಸರಾಸರಿ ಜಿಎಸ್‌ಡಿಪಿ ಶೇ.8.2 ಆಗಿದೆ. ಕಳೆದ ಬಾರಿ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ, ಜಾಗತಿಕವಾಗಿ ಐಟಿ ಮಾರುಕಟ್ಟೆ ಹಿನ್ನಡೆ ಅನುಭವಿಸಿದ್ದರೂ, ಕರ್ನಾಟಕ ಉತ್ತಮ ಆರ್ಥಿಕ ಪ್ರಗತಿ ಸಾಧಿಸಿದೆ.


ನ್ಯಾಷನಲ್‌ ಸ್ಟಾಟಿಸ್ಟಿಕಲ್‌ ಎಸ್ಟಿಮೇಟ್‌ (ಎನ್‌ಎಸ್‌ಸಿ) ಆರಂಭದಲ್ಲಿ ಶೇ. 4ರಷ್ಟು ಕರ್ನಾಟಕದ ಜಿಎಸ್‌ಡಿಪಿ ಅಭಿವೃದ್ಧಿ ದರವನ್ನು ಅಂದಾಜಿಸಿತ್ತು. ಆದರೆ ಹಣಕಾಸು ವರ್ಷದ ಅಂತ್ಯಕ್ಕೆ ರಾಜ್ಯದ ಅಭಿವೃದ್ದಿ ದರ ಶೇ.13.1 ರಷ್ಟಾಗಿದ್ದು, ಎನ್‌ಎಸ್‌ಸಿ ಕರ್ನಾಟಕದ ಪ್ರಗತಿಯನ್ನು ತಪ್ಪಾಗಿ ಅಂದಾಜಿಸಿರುವುದು ಸ್ಪಷ್ಟವಾಗಿದೆ.
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯಿಂದಾಗಿ ಕೃಷಿ ವಲಯದ ಅಭಿವೃದ್ದಿ ಉದ್ದೇಶಿತ ಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ. ಕರ್ನಾಟಕದ Gross State Value Added (ಜಿಎಸ್‌ವಿಎ) ಅಂದರೆ ಒಟ್ಟು ಆರ್ಥಿಕತೆಯಲ್ಲಿ ಐಟಿ ಮತ್ತು ಹಾರ್ಡ್‌ವೇರ್‌ ವಲಯದ ಪಾಲು ಶೇ.28ರಷ್ಟಿದ್ದು, ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಈ ವಲಯ ಜಾಗತಿಕವಾಗಿ ಹಿನ್ನಡೆ ಅನುಭವಿಸಿದೆ. ಭಾರತದ ಐಟಿ ವಲಯ 2022ರ ಹಣಕಾಸು ಸಾಲಿನಲ್ಲಿ ಶೇ.15.5 ರಷ್ಟು ಪ್ರಗತಿ ಕಂಡದ್ದು, 2023ರ ಅವಧಿಯಲ್ಲಿ ಶೇ.8ಕ್ಕೆ ಕುಸಿತ ಅನುಭವಿಸಿದೆ. ಆದರೆ ಉತ್ತಮ ಆಡಳಿತ ಮತ್ತು ಬಹುವಲಯಗಳ ಅಭಿವೃದ್ಧಿಯಿಂದಾಗಿ ಕರ್ನಾಟಕ ರಾಜ್ಯದ ಆರ್ಥಿಕತೆ ಸ್ಥಿರವಾಗಿರುವುದು ಕಂಡು ಬಂದಿದೆ.
2024-25ನೇ ಹಣಕಾಸು ಸಾಲಿಗೆ ಎನ್‌ಎಸ್ಸಿ ಕರ್ನಾಟಕ ರಾಜ್ಯಕ್ಕೆ ಶೇ.9.4 ಜಿಎಸ್‌ಡಿಪಿ ಪ್ರಗತಿಯನ್ನು ಅಂದಾಜಿಸಿದ್ದು, ಇದು ರಾಷ್ಟ್ರೀಯ ಸರಾಸರಿ ಶೇ.10.5ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಆದರೆ ಹಣಕಾಸು ಸಚಿವಾಲಯ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಗಮನದಲ್ಲಿರಿಸಿ ಈ ಅವಧಿಯಲ್ಲಿ ಕರ್ನಾಟಕದ ಜಿಎಸ್‌ಡಿಪಿ ದರವನ್ನು ಶೇ.14ರಷ್ಟು ಅಂದಾಜಿಸಿದೆ. 2024ರ ಸೆಪ್ಟಂಬರ್‌ ಅವಧಿಯಲ್ಲಿ ಕರ್ನಾಟಕ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ.10ರಷ್ಟು ಹಾಗೂ ಮುದ್ರಾಂಕ ಶುಲ್ಕ ಸಂಗ್ರಹದಲ್ಲಿ ಶೇ.24ರಷ್ಟು ಹೆಚ್ಚಳ ದಾಖಲಿಸಿದ್ದು, ಉತ್ತಮ ಆರ್ಥಿಕತೆಯನ್ನು ತೋರಿಸುತ್ತಿದೆ.
ಕರ್ನಾಟಕದ ತಲಾ ಜಿಎಸ್‌ಡಿಪಿ ದೇಶದಲ್ಲೇ ಅತ್ಯಧಿಕವಾಗಿದೆ. ಗ್ಯಾರಂಟಿ ಸೇರಿದಂತೆ ರಾಜ್ಯ ಸರ್ಕಾರದ ಹಲವು ಜನಪರ ಯೋಜನೆಗಳು ಅಭಿವೃದ್ಧಿಯ ಫಲ ಎಲ್ಲಾ ವರ್ಗಗಳಿಗೂ ತಲುಪುವುದನ್ನು ಖಾತ್ರಿಪಡಿಸಿವೆ. ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿಯನ್ನು ಒಂದುಗೂಡಿಸುವ ಕರ್ನಾಟಕದ ಆರ್ಥಿಕ ಮಾದರಿಯ ಯಶಸ್ಸನ್ನು ಇದು ತೋರಿಸುತ್ತದೆ.
ಐಟಿ ವಲಯದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿರುವುದು ದೇಶದ ಡಿಜಿಟಲ್‌ ಮತ್ತು ಆರ್ಥಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಲು ಕಾರಣವಾಗಿದೆ ಎಂದು ಉದ್ಯಮ ರಂಗದ ತಜ್ಞರ ಅಭಿಪ್ರಾಯವಾಗಿದೆ.

Megha News