ರಾಯಚೂರು. ನಗರದ ಎಸ್‌ಎನ್‌ಟಿ ಮತ್ತು ಮಿನಿ ಟಾಕೀಸ್ ಕೆಡವಿ ಸರ್ಕಾರಿ ಕೋಟೆ ಕಂದಕದ ಸ್ಥಳವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ತಡೆಯಬೇಕು ಎಂದು ಕ್ಯೂರೇಟರ್ ಸರ್ಕಾರ ವಸ್ತು ಸಂಗ್ರಹಾಲಯ ನಗರಸಭೆ ಪೌರಾಯಕ್ತರಿಗೆ ಪತ್ರ ಬರೆದಿದೆ.
ನಗರದ ಎಸ್‌ಎನ್‌ಟಿ ಮತ್ತು ಮಿನಿ ಟಾಕೀಸ್‌ನ್ನು ತೆರವು ಗೊಳಿಸಿ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ, ಆದರೆ ಹಿಂಬದಿಯಲ್ಲಿರುವ ಐತಿಹಾಸಿಕ ಕೋಟೆ ಕಂದಕದ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತಿರುವುದು ಕಂಡು ಬಂದಿದೆ.
ಯಾವುದೇ ಸೆಟ್‌ಬ್ಯಾಕ್ ಬಿಡದೇ ನಕ್ಷೆಯ ವಿರುದ್ಧವಾಗಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಕಟ್ಟಡ ನಿರ್ಮಾಣ ತಡೆದು ಅತಿಕ್ರಮಿಸಿದ ಸ್ಥಳವನ್ನು ಪರಿಶೀಲನೆ ಮಾಡಿ ತೆರವುಗೊಳಿಸಬೇಕು ಎಂದು ಸಫಾಯಿ ಕರ್ಮಚಾರಿ ಕ್ಷೇಮಾಭಿವೃದ್ಧಿ ಸಂಘದಿಂದ ದೂರು ನೀಡಲಾಗಿದೆ.
ರಾಜ್ಯ ಸಂರಕ್ಷಿತ ನಗರದ ಕೋಟೆ ಬಾಗಿಲು ನವರಂಗ ದರ್ವಾಜಾ ಸ್ಮಾರಕದಿಂದ ನೈರುತ್ಯಕ್ಕೆ 209.49 ಮೀಟರ್ ಅಂತರದಲ್ಲಿದ್ದು, ಸ್ಮಾರಕದ ನಿಯಂತ್ರಣ ಪ್ರದೇಶದಲ್ಲಿ ಬರುತ್ತದೆ. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಅವಶೇಷ ಕಾಯ್ದೆ 1961 ಮತ್ತು ನಿಯಮ 1965ರ ಪ್ರಕಾರ ಸಂರಕ್ಷಿತ ಸ್ಮಾರಕ ಪ್ರದೇಶದ ಯಾವುದೇ ದಿಕ್ಕಿನಿಂದ 100 ಮೀಟರ್ ನಿಷೇಧಿತ ಪ್ರದೇಶವಾಗಿದ್ದು, ಯಾವುದೇ ಕಟ್ಟಡ ನಿರ್ಮಾಣ, ಗಣಿಗಾರಿಕೆ ಇತರೆ ಚಟುವಟಿಕೆಗಳು ನಡೆಸಲು ನಿಷೇಧಿಸಲಾಗಿದೆ.
ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕ ಯೋಜನೆ ಕಾಮಗಾರಿಯನ್ನು ಒಳಗೊಂಡಂತೆ ಯಾವುದೇ ಕ ಕಾಮಗಾರಿ ನಿರ್ಮಾಣಕ್ಕೆ ಅನುಮತಿ ನೀಡಲಾಗುವುದಿಲ್ಲ, 200 ಮೀಟರ್ ನಿಷೇಧಿತ ಪ್ರದೇಶವಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಮುನ್ನ ಆಯುಕ್ತರ ಪೂರ್ವಾನುಮತಿ ಪಡೆಯಬೇಕು, ಕೂಡಲೇ ಪರಿಶೀಲನೆ ಮಾಡಿ ಕ್ರಮ ವಹಿಸಬೇಕು ಎಂದು ತಿಳಿಸಿದ್ದಾರೆ.