ರಾಯಚೂರು. ಜಿಲ್ಲೆಯಾದ್ಯಂತ ಭಕ್ತಾದಿಗಳು ನದಿ, ಹಳ್ಳ, ಕೆರೆಗಳಲ್ಲಿ ‘ಪುಣ್ಯ ಸ್ನಾನ’ ಮಾಡುವ ಮೂಲಕ ಮಕರ ಸಂಕ್ರಾತಿ ಯನ್ನು ಶ್ರದ್ಧೆಯಿಂದ ಆಚರಿಸಿದರು.
ತುಂಗಭದ್ರಾ, ಮತ್ತು ಕೃಷ್ಣ ನದಿಯಲ್ಲಿ ನೀರು ಇರುವೆಡೆ, ಸಂಗಮ ಸ್ಥಳಗಳು, ಪುಣ್ಯಕ್ಷೇತ್ರದಲ್ಲಿ ಭಕ್ತಿಯಿಂದ ಹಲವರು ಸ್ನಾನ ಮಾಡಿದರು.
ಕುಟುಂಬ ಸಮೇತರಾಗಿ ವಾಹನಗಳಲ್ಲಿ ನದಿ ತೀರಕ್ಕೆ ತೆರಳಿ ನದಿಯಲ್ಲಿ ಸ್ನಾನ ಮಾಡಿದರು.
ಪೂಜಾ ವಿಧಿ ವಿಧಾನಗಳನ್ನು ಮುಗಿಸಿಕೊಂಡರು. ಬಳಿಕ ನದಿ ತೀರದ ದೇಗುಲಗಳಿಗೆ ಹೋಗಿ ಪೂಜೆ, ನೈವೇದ್ಯ ನೆರವೇರಿಸಿದರು. ಅಲ್ಲದೇ ನದಿ ತೀರದಲ್ಲೇ ವಿವಿಧ ಖಾದ್ಯಗಳ ಭೋಜನ ತಯಾರಿಸಿ, ಸವಿದರು.
ಇನ್ನೂ ಹಲವು ಭಕ್ತರು ಮಕರ ಸಂಕ್ರಾತಿಯ ಬೆಳಿಗ್ಗೆ ಎದ್ದು ಬೆಳಗ್ಗಿನ ಕರ್ಮಗಳನ್ನು ಮುಗಿಸಿ ಕೊಂಡು ಬಳಿಕ ನದಿ, ಕೆರೆ, ಸಂಗಮ ಸ್ಥಳಗಳಿಗೆ ತೆರಳಿ ‘ಪುಣ್ಯ ಸ್ನಾನ’ ಮಾಡಿದರು. ದೇಗುಲದಲ್ಲಿ ಪೂಜೆ ನೆರವೇರಿಸಿದ ಬಳಿಕ ಮನೆಗೆ ವಾಪಾಸಾದರು.
ಮನೆಯಲ್ಲಿಯೇ ಸಜ್ಜೆ ರೊಟ್ಟಿ, ಹುಗ್ಗಿ, ಕರ್ಜಿಕಾಯಿ ಮತ್ತಿತರ ಸಿಹಿ ಖಾದ್ಯಗಳ ರೊಟ್ಟಿ ಊಟವನ್ನು ಸವಿದರು. ಹಲವೆಡೆ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು.