Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

State News

ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಮೂಲಭೂತ ಸೌಕರ್ಯ ಅಭಿವೃದ್ದಿ: ಸಚಿವ ಎಂ.ಬಿ ಪಾಟೀಲ

ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಮೂಲಭೂತ ಸೌಕರ್ಯ ಅಭಿವೃದ್ದಿ: ಸಚಿವ ಎಂ.ಬಿ ಪಾಟೀಲ

ರಾಯಚೂರಿಗೆ ಟೆಕ್ಸ್‌ಟೈಲ್‌ ಪಾರ್ಕ್‌ ಪ್ರಸ್ತಾಪನೆ ಸಲ್ಲಿಸಲು ನಿರ್ಧಾರ

ಬೆಂಗಳೂರು: ರಾಜ್ಯದ ಎಲ್ಲಾ ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಿದ ನಂತರ ಆಯಾ ಕೈಗಾರಿಕಾ ಸಂಘಗಳ ಸುಪರ್ಧಿಗೇ ಅವುಗಳ‌ ನಿರ್ವಹಣೆಯನ್ನು ಒಪ್ಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು *ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ದಿ ಸಚಿವರಾದ ಎಂ.ಬಿ ಪಾಟೀಲ ಭರವಸೆ ನೀಡಿದರು.

ಇಂದು ಬೆಂಗಳೂರಿನ ಉದ್ಯೋಗ ಮಿತ್ರ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿಂತೆ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌, ರಾಯಚೂರು ಜಿಲ್ಲೆಯ ಶಾಸಕರು ಹಾಗೂ ರಾಯಚೂರು ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಹಲವಾರು ಅವಕಾಶಗಳಿವೆ. ಹಿಂದುಳಿದ ಪ್ರದೇಶವಾಗಿರುವ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿ ರಾಯಚೂರು ಹೊರಹೊಮ್ಮುತ್ತಿದೆ. ಕೈಗಾರಿಕೆಗಳ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿತರಾಗುವಂತೆ ಮಾಡುವ ನಿಟ್ಟಿನಲ್ಲಿ ನಾವುಗಳು ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಕೈಗಾರಿಕೋದ್ಯಮಿಗಳು ಹಾಗೂ ಜನಪ್ರತಿನಿಧಿಗಳ ಸಮಸ್ಯೆಗಳನ್ನು ಆಲಿಸಿದ ಬೃಹತ್‌ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ ಮಾತನಾಡಿ, ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನ ಸರಿಪಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಸಮಸ್ಯೆಗಳನ್ನು ಒಂದು ಬಾರಿ ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ದಿ ಮತ್ತು ಸಮಸ್ಯೆಗಳ ನಿವಾರಣೆಯ ನಂತರ ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ಸಂಘಗಳಿಗೆ ವಹಿಸಿಕೊಡಲಾಗುವುದು. ಕೈಗಾರಿಕಾ ಪ್ರದೇಶದಿಂದ ಸಂಗ್ರಹವಾಗುವ ಕರದಲ್ಲಿ ಶೇಕಡಾ 70 ರಷ್ಟು ಕೈಗಾರಿಕಾ ಸಂಘಕ್ಕೆ ಮತ್ತು ಶೇಕಡಾ 30 ರಷ್ಟು ಆಯಾ ನಗರಸಭೆಗಳಿಗೆ ನೀಡಲಾಗುವುದು. ಇದರಿಂದ ಬಹಳಷ್ಟು ಸಮಸ್ಯೆಗಳು ನಿವಾರಣೆಯಾಗಲಿವೆ ಎಂದು ಹೇಳಿದರು.

ರೈಸ್‌ ಮಿಲ್‌ಗಳಿಗೆ ಮೀಸಲಾದ ನೀರಿನ ಪೈಪ್‌ಲೈನ್‌:
ರಾಯಚೂರು ನಗರದಲ್ಲಿ 90 ಕ್ಕೂ ಹೆಚ್ಚು ರೈಸ್‌ಮಿಲ್ ಗಳಿವೆ. ಈ ರೈಸ್‌ಮಿಲ್‌ಗಳ ನಿರ್ವಹಣೆಗಾಗಿ ನೀರಿನ ಅಗತ್ಯವಿದೆ. ಕೈಗಾರಿಕಾ ಪ್ರದೇಶಗಳಿಗೆ ಮೀಸಲಾದ ನೀರಿನ ಸಂಪರ್ಕ ಇಲ್ಲದೆ ಇರುವ ಕಾರಣ ರೈಸ್‌ ಮಿಲ್‌ಗಳು ತುಂಬ ಸಮಸ್ಯೆಗೆ ಸಿಲುಕಿವೆ. ಅಲ್ಲದೇ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈಸ್ ಮಿಲ್‌ಗಳನ್ನು ಸ್ಥಾಪಿಸಲು ನೀರಿನ ಅಗತ್ಯತೆ ಹೆಚ್ಚಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ರೈಸ್‌ ಮಿಲ್ ಗಳಿಗೆ ಮೀಸಲಾದ ಪೈಪ್‌ ಲೈನ್‌ ನಿರ್ಮಾಣದ ವರದಿಯನ್ನ ಸಲ್ಲಿಸುವಂತೆ ಸಚಿವ ಎಂ.ಬಿ ಪಾಟೀಲ ಕೆಐಡಿಬಿ ಅಧಿಕಾರಿಗಳಿಗೆ ಸೂಚಿಸಿದರು.

ಔಷಧ ಕಂಪನಿಗಳ ತ್ಯಾಜ್ಯ ವಿಲೇವಾರಿ ಸೌಲಭ್ಯ ನಿರ್ಮಾಣಕ್ಕೆ ಆದ್ಯತೆ:
ಔಷಧ ಕಂಪನಿಗಳ ಹಬ್‌ ಆಗಿ ಹೊರಹೊಮ್ಮಿರುವ ರಾಯಚೂರು ಕೈಗಾರಿಕಾ ಪ್ರದೇಶದಲ್ಲಿ ಸಿಇಟಿಪಿಯ ಕೊರತೆಯಿದೆ. ಇದರಿಂದಾಗಿ ತ್ಯಾಜ್ಯವು ಅಂತರ್ಜಲ ಸೇರ್ಪಡೆಯಾಗುತ್ತಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿ ಸೌಲಭ್ಯವನ್ನು ಅಳವಡಿಸುವ ಕಾರ್ಯ ವಿಳಂಬವಾಗಿರುವುದನ್ನ ಕೈಗಾರಿಕೋದ್ಯಮಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಸಚಿವರು, ಕೂಡಲೇ ತ್ಯಾಜ್ಯ ವಿಲೇವಾರಿ ಕೇಂದ್ರವನ್ನು ನಿರ್ಮಿಸಬೇಕು. ಇದಕ್ಕೆ ಈಗಾಗಲೇ ಅನುಮತಿ ನೀಡಿರುವ ಮದರ್‌ ಅರ್ಥ್‌ ಕಂಪನಿಯ ಜೊತೆಯಲ್ಲಿ ಚರ್ಚಿಸಿ ಕೈಗಾರಿಕೋದ್ಯಮಿಗಳೀಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ರಾಯಚೂರಿನಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾಪ:
ರಾಯಚೂರು ಜಿಲ್ಲೆಯಲ್ಲಿ 120 ಕ್ಕೂ ಹೆಚ್ಚು ಜಿನ್ನಿಂಗ್‌ ಘಟಕಗಳಿವೆ. ಏಷಿಯಾದ 2 ನೇ ಅತಿದೊಡ್ಡ ಕಾಟನ್‌ ಮಾರ್ಕೆಟ್‌ ಆಗಿರುವ ಈ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣದ ಅವಶ್ಯಕತೆಯಿದೆ. ಈಗಾಗಲೇ ಕೇಂದ್ರ ಸರಕಾರ ಯಾದಗಿರಿ ಜಿಲ್ಲೆಯಲ್ಲಿ ಟೆಕ್ಸ್‌ಟೈಲ್‌ ಪಾರ್ಕನ್ನು ನೀಡಲು ಅನುಮತಿ ನೀಡಿದೆ. ಈ ಹಿನ್ನಲೆಯಲ್ಲಿ ರಾಯಚೂರಿನಲ್ಲೂ ಇನ್ನೊಂದು ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸುವಂತೆ ಕೈಗಾರಿಕಾ ಆಯುಕ್ತರಿಗೆ ಸಚಿವ ಎಂ.ಬಿ ಪಾಟೀಲ ಸೂಚಿಸಿದರು.

ರಾಯಚೂರಿನಲ್ಲಿ ವಂದೇ ಭಾರತ್‌ ರೈಲು ನಿಲುಗಡೆಗೆ ಕೇಂದ್ರಕ್ಕೆ ಮನವಿ ಸಲ್ಲಿಕೆ:
ಬೆಂಗಳೂರು- ಹೈದರಾಬಾದ್‌ ನಡುವೆ ಸಂಚರಿಸಲಿರುವ ವಂದೇ ಭಾರತ್‌ ರೈಲು ರಾಯಚೂರು ಮೂಲಕ ಸಂಚರಿಸುವ ಹಾಗೆ ಮಾಡಬೇಕು. ಹಾಗೆಯೇ ಅಲ್ಲಿ ನಿಲುಗಡೆಗೆ ಅವಕಾಶ ನೀಡುವಂತೆ ಕೇಂದ್ರ ರೈಲ್ವೇ ಇಲಾಖೆಗೆ ಪತ್ರ ಬರೆಯುವಂತೆ ಕೈಗಾರಿಕೋದ್ಯಮಿಗಳು ಸಚಿವರಿಗೆ ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಕೈಗಾರಿಕಾ ಸಂಘಗಳ ಮನವಿಯ ಆಧಾರದ ಮೇಲೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಭರವಸೆ ನೀಡಿದರು.

ಲಾಜಿಸ್ಟಿಕ್‌ ಪಾರ್ಕ್‌ ನಿರ್ಮಾಣ:
ರಾಯಚೂರು ನಗರ ಲಾಜಿಸ್ಟಿಕ್‌ ಹಬ್‌ ಆಗುವ ಎಲ್ಲಾ ರೀತಿಯ ಸೌಲಭ್ಯಗಳನ್ನ ಹೊಂದಿದೆ. ಹತ್ತಿರದಲ್ಲೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ಮತ್ತು ರಾಷ್ಟ್ರೀಯ ಹೆದ್ದಾರಿಗಳ ನೆಟ್‌ ವರ್ಕ್‌ ಇದ್ದು ಈ ಬಗ್ಗೆಯೂ ಹೆಚ್ಚಿನ ಆಸಕ್ತಿ ವಹಿಸುವಂತೆ ಕೈಗಾರಿಕೋದ್ಯಮಿಗಳ ಮನವಿಗೆ ಸ್ಪಂದಿಸಿದ ಕೈಗಾರಿಕಾ ಸಚಿವರು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ್‌ ಪಾಟೀಲ್‌ ಸೇರಿದಂತೆ ಜಿಲ್ಲೆಯ ಶಾಸಕರು, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಸೆಲ್ವಕುಮಾರ್‌, ಕೈಗಾರಿಕಾ ಅಭಿವೃದ್ದಿ ಆಯುಕ್ತರಾದ ಗುಂಜನ್‌ ಕೃಷ್ಣ, ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Megha News