ಬೆಳಗಾವಿ ಡಿ 18: ಗಣಿಗಾರಿಕೆಯಿಂದ ಹಲವು ಸಮಸ್ಯೆಗಳಿಗೆ ತುತ್ತಾಗಿರುವ ಹಟ್ಟಿ ಚಿನ್ನದ ಗಣಿ ಗಡಿ ಪಕ್ಕದಲ್ಲಿರುವ ಬುದ್ದಿನ್ನಿ ಗ್ರಾಮವನ್ನು ಸ್ಥಳಾಂತರಗೊಳಿಸಿ, ಆ ಗ್ರಾಮಸ್ಥರುಗಳಿಗೆ ಹಟ್ಟಿ ಚಿನ್ನದ ಗಣಿಯಲ್ಲಿ ಉದ್ಯೋಗ ದೊರಕಿಸುವ ಭರವಸೆಯನ್ನ ನೀಡಲಾಯಿತು.
ಇಂದು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಎಸ್ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶರಣ ಪ್ರಕಾಶ್ ಪಾಟೀಲ್, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷರಾದ ಜಿ.ಟಿ ಪಾಟೀಲ್, ಮಾನ್ವಿ ಶಾಸಕರಾದ ಹಂಪಯ್ಯ ನಾಯಕ್ ಅವರ ಉಪಸ್ಥಿತಿಯಲ್ಲಿ ಇಂದು ಹಟ್ಟಿ ಚಿನ್ನದ ಗಣಿ ಕಂಪನಿಗೆ ಸಂಬಂಧಿಸಿದಂತೆ ಕಂಪನಿಯ ಕಾರ್ಮಿಕರು ಹಾಗೂ ಬುದ್ದಿನ್ನಿ ಮೈನ್ಸ್‌ಗೆ ಸೇರಿರುವ ಗ್ರಾಮಸ್ಥರುಗಳ ತೊಂದರೆಗಳ ಪರಿಹಾರದ ಬಗ್ಗೆ ಸಭೆ ನಡೆಸಲಾಯಿತು.
ಮಾನ್ವಿ ವಿಧಾನಸಭಾ ಕ್ಷೇತ್ರದ ಬುದ್ದಿನ್ನಿ ಗ್ರಾಮದಲ್ಲಿ ಚಿನ್ನದ ಗಣಿಯ ಗಣಿಕಾರಿಕೆಯ ಸ್ಪೋಟದಿಂದ ಬಹಳಷ್ಟು ತೊಂದರೆ ಆಗುತ್ತಿದೆ. ಈ ಗ್ರಾಮವನ್ನು ಸ್ಥಳಾಂತರಿಸುವ ಅಗತ್ಯವಿದ್ದು, ಪರಿಹಾರದ ಜೊತೆಯಲ್ಲಿಯೇ ಗ್ರಾಮಸ್ಥರುಗಳಿಗೆ ಪ್ರತಿ ಮನೆ ಒಬ್ಬ ಸದಸ್ಯರುಗಳಿಗೆ ಚಿನ್ನದ ಗಣಿಯಲ್ಲಿ ಉದ್ಯೋಗ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕಂಪನಿ ಕಾಯ್ದೆಯ ಪ್ರಕಾರ ಗಣಿಗಾರಿಕೆಗೆ ಭೂಮಿಯನ್ನು ಕಳೆದುಕೊಂಡಿರುವ ಜಮೀನು ಮಾಲೀಕರುಗಳಿಗೆ ಉದ್ಯೋಗ ನೀಡುವ ಅವಕಾಶವಿದೆ. ಆದರೆ ಸ್ಥಳಾಂತರಗೊಳಿಸುವ ಗ್ರಾಮಸ್ಥರುಗಳಿಗೆ ಉದ್ಯೋಗ ನೀಡುವ ಅವಕಾಶ ಇಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸಚಿವ ಎನ್ ಎಸ್ ಭೋಸರಾಜು ಬರವಸೆ ನೀಡಿ ಬಗ್ಗೆ ಚಿನ್ನದ ಗಣಿಯ ಬೋರ್ಡ್ ಸಭೆಯಲ್ಲಿ ಅಗತ್ಯ ಅನುಮೋದನೆ ಪಡೆದಲ್ಲಿ ಸರಕಾರದ ಮಟ್ಟದಲ್ಲಿ ಅಗತ್ಯ ತಿದ್ದುಪಡಿ ಮಾಡಬಹುದಾಗಿದೆ. ಮಾನ್ವಿ ತಾಲ್ಲೂಕಿನ ಬುದ್ದಿನ್ನಿ ಗ್ರಾಮಸ್ಥರು ಹಲವಾರು ವರ್ಷಗಳಿಂದ ಈ ಸಮಸ್ಯೆಯಿಂದ ಬಳಲಿದ್ದಾರೆ. ಈಗಾಗಲೇ ಗಣಿಗಾರಿಕೆ ಈ ಗ್ರಾಮಸ್ಥರ ಮನೆಗಳ ತಳಕ್ಕೆ ಹಬ್ಬಿದ್ದು, ಪ್ರತಿ ಸ್ಪೋಟದ ಸಂಧರ್ಭದಲ್ಲೂ ಗ್ರಾಮಸ್ಥರುಗಳ ಮನೆಗಳು ಅಲುಗಾಡುತ್ತವೆ. ಇಲ್ಲಿಂದ ಮನೆಗಳನ್ನು ಸ್ಥಳಾಂತರಗೊಳಿಸುವ ಅಗತ್ಯವಿದೆ. ಮನೆಗಳನ್ನು ಕಳೆದುಕೊಳ್ಳುವ ಗ್ರಾಮಸ್ಥರಿಗೆ ಪರಿಹಾರದ ಜೊತೆಯಲ್ಲಿಯೇ ಉದ್ಯೋಗ ದೊರಕಿಸಿ ಕೊಡಬೇಕು ಎಂದರು.
*ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಎಸ್ ಮಲ್ಲಿಕಾರ್ಜುನ್* ಅವರು, ಪ್ರಾಥಮಿಕವಾಗಿ ಗುತ್ತಿಗೆ ಆಧಾರದಲ್ಲಿ ಈ ಗ್ರಾಮಸ್ಥರುಗಳನ್ನು ನೇಮಕಗೊಳಿಸುವ ನಿಟ್ಟಿನಲ್ಲಿ ಆಧ್ಯತೆ ನೀಡಬೇಕು ಎಂದು ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.
*ಗ್ರಾಮದ ಸ್ಥಳಾಂತರದ ಬಗ್ಗೆ ಸಭೆ:*
ಬುದ್ದಿನ್ನಿ ಗ್ರಾಮಸ್ಥರನ್ನು ಸ್ಥಳಾಂತರಗೊಳಿಸುವ ನಿಟ್ಟಿನಲ್ಲಿ ರಾಯಚೂರಿನಲ್ಲಿ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು, ಸಚಿವ ಎನ್ ಎಸ್ ಭೋಸರಾಜು, ಶಾಸಕರಾದ ಹಂಪಯ್ಯ ನಾಯಕ್ ಹಾಗೂ ಜಿಲ್ಲಾಡಳಿತದೊಂದಿಗೆ ಸಭೆಯನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಭೆಯಲ್ಲಿ ಗ್ರಾಮಸ್ಥರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು.
ಇದೇ ವೇಳೆ, ಕಂಪನಿಯ ಕಾರ್ಮಿಕರುಗಳಿಗೆ ನಡೆಸಲಾಗುತ್ತಿದ್ದ ಹೆಲ್ತ್ ಚೆಕ್ ಅಪ್ ಅನ್ನು ಪುನರಾರಂಭಿಸುವ ನಿಟ್ಟಿನಲ್ಲೂ ಚರ್ಚಿಸಲಾಯಿತು.
ಸಭೆಯಲ್ಲಿ ಮಾನ್ವಿ ಶಾಸಕರಾದ ಹಂಪಯ್ಯ ನಾಯಕ್, ಮಾಜಿ ಶಾಸಕರಾದ ಡಿ.ಎಸ್ ಹುಲಿಗೇರಿ, ಕಂಪನಿಯ ಕಾರ್ಮಿಕರು, ಬುದ್ದಿನ್ನಿ ಗ್ರಾಮಸ್ಥರು ಹಾಗೂ ಕಂಪನಿಯ ಅಧಿಕಾರಿಗಳು ಉಪಸ್ಥಿತರಿದ್ದರು.