ಬೆಂಗಳೂರು: ವಿದ್ಯಾರ್ಥಿಗಳಿಗೆ ನೂತನ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಹಾಗೂ ಸಂಶೋಧನೆ, ಪ್ರಾಯೋಗಿಕ ಕಲಿಕೆಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ನೆಹರು ಸ್ಟ್ರೀಮ್ ಲ್ಯಾಬ್‌ಗಳ ಸ್ಥಾಪಿಸುವ ಚಿಂತನೆ ನಡೆದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಹೇಳಿದರು. ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಯುವ ಮನಸ್ಸುಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆ ಬೆಳೆಸುವುದು ಈ ಲ್ಯಾಬ್ನ ಉದ್ದೇಶ. ವಿದ್ಯಾರ್ಥಿಗಳ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿರಲು ಮತ್ತೆ ಸಮಸ್ಯೆಗಳ ಪರಿಹಾರಕ್ಕೆ ಪ್ರಾಯೋಗಿಕವಾಗಿ ಚರ್ಚಿಸಲು, ಸಂಶೋಧಿಸಲು ಹಾಗೂ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಇದು ಪ್ರೇರೇಪಿಸಲಿದೆ. ಈ ಲ್ಯಾಬ್‌ಗಳಲ್ಲಿ ಇದಕ್ಕೆ ಪೂರಕವಾದ ಪರಿಸರವನ್ನು ಅಳವಡಿಸಲಾಗುವುದು. 21ನೇ ಶತಮಾನದ ಕೌಶಲ್ಯಗಳ ಕಲಿಕೆಗೆ ಅನುವು ಮಾಡಿಕೊಡುವ ಪಠ್ಯಕ್ರಮವನ್ನು ಇದರಲ್ಲಿ ಅಳವಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ನೆಹರು ಸ್ಟ್ರೀಮ್ ಲ್ಯಾಬ್ ಒಂದು ಪ್ರಯೋಗಾಲಯ ಸ್ಥಳವಾಗಿರಲಿದೆ. ಯುವ ಮನಸ್ಸುಗಳು ಹೊಸ ಕೌಶಲ್ಯಗಳನ್ನು ಕಲಿಯುವ ನಿಟ್ಟಿನಲ್ಲಿ ‘ಡೂ ಇಟ್ ಯುವರ್ ಸೆಲ್ಫ್’ ಪ್ರಯೋಗಗಳ ಮೂಲಕ ಅನುಭವ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಒದಗಿಸಲಿದೆ. ಸ್ಟ್ರೀಮ್ (ವಿಜ್ಞಾನ, ತಂತ್ರಜ್ಞಾನ, ರೊಬೊಟಿಕ್ಸ್, ಪರಿಸರ ಮತ್ತು ಪರಿಸರ ವಿಜ್ಞಾನ, ಖಗೋಳಶಾಸ್ತ್ರ ಮತ್ತು ಗಣಿತ) ಪರಿಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಉಪಕರಣಗಳು ಮತ್ತು ಸಲಕರಣೆಗಳೊಂದಿಗೆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದು ನಮ್ಮ ಉದ್ದೇಶ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಭಾರತದ ವಿಜ್ಞಾನ ಕ್ಷೇತ್ರದ ಸಾಧನೆಯನ್ನು ವಿಶ್ವಕ್ಕೆ ಪರಿಚಯಿಸಿದ್ದು ಸಿ.ವಿ.ರಾಮನ್. ಶಾಲಾ ಮಕ್ಕಳು ಇವರಂತೆ ಸಾಧನೆ ಮಾಡಲು ಮುಂದಾಗಬೇಕು. ಪಾಲಕರು ತಮ್ಮ ಮಕ್ಕಳ ಭವಿಷ್ಯ ರೂಪಿಸಲು ತ್ಯಾಗ ಮಾಡುತ್ತಾರೆ. ಅವರ ತ್ಯಾಗಕ್ಕೆ ತಕ್ಕಂತಹ ಸಾಧನೆಯನ್ನು ಮಾಡುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾಗ ಶಾಲಾ ಮಕ್ಕಳಿಗೆ ವಿಜ್ಞಾನ ಅಕಾಡೆಮಿ ಸ್ಥಾಪಿಸಿದ್ದನ್ನ ನೆನೆಪಿಸಿಕೊಂಡು ಇನ್ನಷ್ಟು ವಿಜ್ಞಾನಿಗಳು ಉದಯಿಸಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಜರಿದ್ದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ವಿಜ್ಞಾನ ಇಲ್ಲದಿದ್ದರೆ ಪ್ರಪಂಚವಿಲ್ಲ. ವಿಜ್ಞಾನ ಮತ್ತು ತಂತ್ರಜ್ಞಾನ ಎರಡೂ ಮುಖ್ಯವಾದ ವಿಷಯಗಳಾಗಿವೆ. ನಮ್ಮ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಸರ್. ಸಿ.ವಿ. ರಾಮನ್ ಕೂಡ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿದ್ದರು. ಈಗಲೂ ಪ್ರಪಂಚದ ಎಲ್ಲರೂ ಅವರ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಇವರಿಂದ ಪ್ರೇರೇಪಣೆಗೊಂಡು ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳು ಪ್ರಾರಂಭವಾದಾಗ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ತೊಡಗಿಕೊಂಡಿದೆ ಎಂದರು.
ಪ್ರಾಥಮಿಕ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ನಮ್ಮ ಇಲಾಖೆಯ ವ್ಯಾಪ್ತಿಯಲ್ಲಿ ಬರುವ 66 ಸಾವಿರ ಶಾಲೆಗಳಲ್ಲಿ 60 ಲಕ್ಷ ಮಕ್ಕಳಿದ್ದಾರೆ. ಮಕ್ಕಳಿಗೆ ಸೂಕ್ತ ಸಹಕಾರ ನೀಡುವುದು ಸರ್ಕಾರ ಅಥವಾ ಪಾಲಕರ ಜವಾಬ್ದಾರಿ. ಮಕ್ಕಳಿಗಾಗಿ ಶಾಲೆಗಳಲ್ಲಿ Tinkering Labs ಸ್ಥಾಪಿಸುತ್ತಿದ್ದು, ರಾಜ್ಯದ ಎಲ್ಲ ಶಾಲೆಗಳಿಗೆ ಉಚಿತವಾಗಿ ವಿದ್ಯುತ್ ಮತ್ತು ಕುಡಿಯುವ ನೀರು ಒದಗಿಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ನಮ್ಮ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ವಿಜ್ಞಾನ ಬೆಳೆಯಲು ಪ್ರಧಾನಿ ನೆಹರು ಹೆಚ್ಚು ಪ್ರೇರಣೆ ಕೊಟ್ಟಿದ್ದರು. ಶಾಲಾ ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಯ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ವೈಚಾರಿಕತೆ ಬಂದರೆ ಹಾಗೂ ತಾರ್ಕಿಕ ಯೋಚನೆ ಬೆಳೆಸಿಕೊಂಡರೆ ಮೂಡನಂಬಿಕೆಯಿಂದ ಹೊರಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಈ ಬಾರಿ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಮತ್ತು ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು.
ಕಾರ್ಯಕ್ರಮದಲ್ಲಿ ಐಟಿ, ಬಿಟಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್, ಕೆಸ್ಟೆಪ್ಸ್ ವ್ಯವಸ್ಥಾಪಕ ನಿರ್ದೇಶಕ ಪವನ್ ಕುಮಾರ್ ಮಾಲಪಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.