ಬೆಂಗಳೂರು.ತುಂಗಭದ್ರಾ ಜಲಾಶಯ ಅಣೆಕಟ್ಟು ಪ್ರದೇಶದ ಎರಡನೇ ಬೆಳೆಗಾಗಿ ಎಡದಂಡೆ ಕಾಲುವೆಗಳಿಗೆ ನೀರು ಹರಿಸಲು ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನಿಸಿದೆ. ಇದೇ ಡಿಸೆಂಬರ್ ಪೂರ್ಣ ಅವಧಿಯವರೆಗೆ ಕಾಲುವೆಗಳಿಗೆ 2500 ಕ್ಯೂಸೆಕ್ಸ್ ನೀರು ಬಿಡಲಾಗುವುದು. ಜನವರಿ 1 ರಿಂದ ಮಾರ್ಚ್ 31 2025 ರ ವರೆಗೆ ಸುಮಾರು 90 ದಿನಗಳ ಕಾಲ 3850 ಕ್ಯೂಸೆಕ್ಸ್ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಚಿವ ಎನ್ಎಸ್ ಬೋಸರಾಜು ಹಾಗೂ ಸಚಿವರು, ನೀರಾವರಿ ಸಲಹಾ ಸಮಿತಿ ಅದ್ಯಕ್ಷರಾದ ಶಿವರಾಜ ತಂಗಡಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ನೇತೃತ್ವದಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಿಗದಿತ ದಿನಾಂಕಗಳಂದು ಎಡದಂಡೆ ಕಾಲುವೆಗಳಲ್ಲಿ ನೀರು ಬಿಡಲಾಗುವುದು. 97 ಟಿಎಂಸಿ ತುಂಗಭದ್ರ ಜಲಾಶಯದಲ್ಲಿ ನೀರು ಲಭ್ಯವಿದ್ದು ಸಮರ್ಪಕವಾಗಿ ನೀರು ಬಿಡಲು ತೀರ್ಮಾನಿಸಲಾಗಿದೆ.
ಮಾನ್ವಿ, ಸಿರವಾರ, ರಾಯಚೂರು ಕೆಳಭಾಗಕ್ಕೆ ನೀರು ಸಮರ್ಪಕವಾಗಿ ಸರಬರಾಜು ಮಾಡಲು ಎಲ್ಲಾ ಮೆಲ್ಭಾಗದ ಮೈಲ್ ಗಳಲ್ಲಿ ಅಧಿಕಾರಿಗಳು ನೀರಿನ ಪ್ರಮಾಣವನ್ನು ಕಾಯ್ದಿರಿಸಲು ಪ್ರಯತ್ನಿಸಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ್ ಬಸನಗೌಡ ತುರವಿಹಾಳ್, ಡಾ.ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಪರಿಷತ್ ಸದಸ್ಯ ವಸಂತ ಕುಮಾರ, ಬಸನಗೌಡ ಬಾದರ್ಲಿ, ಎಚ್.ಆರ್. ಗವಿಯಪ್ಪ, ಶರಣಗೌಡ ಬಯ್ಯಾಪುರ, ಶಾಸಕ ನಾಗರಾಜ ಸೇರಿ ಅನೇಕರು ಉಪಸ್ಥಿತರಿದ್ದರು.