ಬೆಂಗಳೂರು: ದೇವದುರ್ಗ ಕ್ಷೇತ್ರದಲ್ಲಿ ಮಾಜಿ ಶಾಸಕನ ಬೆಂಬಲಿಗರಿಂದ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಪ್ರಯತ್ನಿಸಿದ್ದರಿಂಸ ಜೀವ ಬೆದರಿಕೆ ಇದೆ ರಕ್ಷಣೆ ನೀಡಬೇಕೆಂದು ವಿಧಾನಸಭೆಯಲ್ಲಿ ದೇವದುರ್ಗ ಶಾಸಕಿ ಕರೆಮ್ಮ ಜಿ.
ನಾಯಕ್ ಮನವಿ ಮಾಡಿದರು.
ಅವರಿಂದು ವಿಧಾನ ಮಂಡಲದಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದರು. ನಾನೊಬ್ಬಳು ಬಡ ಶಾಸಕಿ. ಆದರೆ ನನ್ನ ಕ್ಷೇತ್ರದಲ್ಲಿ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ತೋಡಿಕೊಂಡರು.ಕ್ಷೇತ್ರದ ಮಾಜಿ ಶಾಸಕರ ಬೆಂಬಲಿಗರಿಂದ ನನಗೆ ಆತಂಕವಿದೆ. ವಿಧಾನಸಭೆಯಲ್ಲೂ ನನ್ನ ಸೀಟಿನಲ್ಲಿ ಬೇರೊಬ್ಬ ವ್ಯಕ್ತಿ ಬಂದು ಕುಳಿತುಕೊಂಡಿದ್ದರು ಎಂದರು.
ನನ್ನ ತಮ್ಮನ ಮಗನ ಮೇಲೆ ಹಲ್ಲೆ ನಡೆದಿದ್ದು, ಉಸುಕು ಮಾರುವವರಿಂದ ಹಲ್ಲೆಯಾಗಿದೆ ಎಂದು ಆರೋಪಿಸಿದರು.೨೪ ವರ್ಷದ ಹುಡುಗನ ಮೇಲೆ ಹಲ್ಲೆ ನಡೆದಿದೆ. ಶಾಸಕಿಯಾದ್ರೂ ಕ್ಷೇತ್ರದಲ್ಲಿ ನನಗೆ ಭಯವಿದೆ. ಉಸುಕು ಅಕ್ರಮಕ್ಕೆ ನಾನು ಕಡಿವಾಣ ಹಾಕಿದ್ದೆ.ನನ್ನನ್ನ ಜನ ಹುಡಿ ತುಂಬಿಸಿ ಗೆಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ನನ್ನ ಮಾತು ಕೇಳ್ತಿಲ್ಲ ಎಂದು ಆರೋಪ ಮಾಡಿದರು.
ಅಧಿಕಾರಿಗಳು ಮಾಜಿ ಶಾಸಕರ ಬೆಂಬಲಕ್ಕೆ ನಿಂತಿದ್ದಾರೆ. ಶಿಷ್ಟಾಚಾರಕ್ಕಾದ್ರೂ ಅಧಿಕಾರಿಗಳು ನನ್ನ ಮಾತಿಗೆ ಬೆಲೆ ಕೊಡ್ತಿಲ್ಲ. ನನಗೆ ಕ್ಷೇತ್ರದಲ್ಲಿ ರಕ್ಷಣೆ ಕೊಡಬೇಕು, ಜನಸೇವೆಗೆ ಅವಕಾಶ ಮಾಡಿಕೊಡಬೇಕು ಎಂದು ಸ್ಪೀಕರ್ ಬಳಿ ಒತ್ತಾಯಿಸಿದರು.
ಈ ವೇಳೆ ನೂತನ ಶಾಸಕಿಗೆ ಅಭಯ ನೀಡಿದ ಸ್ಪೀಕರ್ ಯು.ಟಿ ಖಾದರ್, ನಿಮಗೆ ಯಾವುದೇ ಆತಂಕ ಬೇಡ. ನಾವು ನಿಮ್ಮ ರಕ್ಷಣೆಗೆ ಇದ್ದೇವೆ. ಗೃಹ ಸಚಿವರ ಜೊತೆ ನಾನು ಮಾತನಾಡ್ತೇನೆ ಎಂದು ಭರವಸೆ ನೀಡಿದರು.