ರಾಯಚೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅಸಭ್ಯ ಮತ್ತು ಕೀಳಾಗಿ ಮಾತನಾಡಿ ಅವರನ್ನು ಅವಹೇಳನ ಮಾಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿ, ತಕ್ಷಣವೇ ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಸಂಸದ ಜಿ.ಕುಮಾರ್ ನಾಯಕ್ ಆಗ್ರಹಿಸಿದ್ದಾರೆ.
ಅಂಬೇಡ್ಕರ್ ಅವರ ತತ್ವಗಳು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸಲು ಪ್ರೇರಣೆಯಾಗಿವೆ. ಅವರನ್ನು ಅವಮಾನಿಸುವ ಮಾತುಗಳು ದೇಶದ ಸಂವಿಧಾನದ ಮೇಲೆ ನಡೆಸಿರುವ ದಾಳಿಯಂತೆ ಕಂಡು ಬರುತ್ತದೆ’ ಎಂದು ಸೋಮವಾರ ಹೇಳಿದ್ದಾರೆ.
ಭಾರತದ ಸಂವಿಧಾನಕ್ಕೆ ಬುನಾದಿ ಹಾಕಿ ಪ್ರಜಾಪ್ರಭುತ್ವ ಬಲಪಡಿಸಿದವರು ಅಂಬೇಡ್ಕರ್. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ತಿಳಿಸಿದ್ದಾರೆ.
‘ಅಂಬೇಡ್ಕರ್.. ಅಂಬೇಡ್ಕರ್.. ಅಂಬೇಡ್ಕರ್ ಎಂದು ಹೇಳುವುದು ಈಗ ಫ್ಯಾಶನ್ ಆಗಿ ಬಿಟ್ಟಿದೆ. ಅದರ ಬದಲು ದೇವರನ್ನು ನೆನೆದರೆ ಸ್ವರ್ಗ ಸಿಗುತ್ತದೆ’ ಎಂದು ಅಮಿತ್ ಶಾ ಹೇಳುವುದರ ಮೂಲಕ ಅಂಬೇಡ್ಕರ್ ಅವರ ತತ್ವಾದರ್ಶ, ಅವರ ವಿಚಾರಗಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದರಿಂದ ದೇಶದ ಜನರಿಗೆ ನೋವಾಗಿದೆ. ಬಿಜೆಪಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಲ್ಲ ಎನ್ನುವುದು ಅಮಿತ್ ಶಾ ಅವರ ಹೇಳಿಕೆ ತೋರಿಸುತ್ತದೆ. ಕಾಂಗ್ರೆಸ್ ಪಕ್ಷ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಆದರ್ಶಗಳನ್ನು ರಕ್ಷಿಸಲು ಸದಾ ಬದ್ಧವಾಗಿದೆ’ ಎಂದು ತಿಳಿಸಿದ್ದಾರೆ.