ರಾಯಚೂರು.ಮಸ್ಕಿ ತಾಲೂಕಿನ ವಟಗಲ್, ಪಾಮನ ಕಲ್ಲೂರಿನ ಮುರಾರ್ಜಿ ವಸತಿ ಶಾಲೆಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ತುಕಾರಾಂ ಪಾಂಡ್ವೆ ರವರು ಭೇಟಿ ನೀಡಿ ಪರಿಶೀಲಿಸಿದರು.
ವಟಗಲ್ ವಸತಿ ಶಾಲೆಯಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಆದಷ್ಟು ಬೇಗ ಪರಿಹರಿಸಬೇಕು ಎಂದರು. ನಂತರ ಪಾಮನಕಲ್ಲೂರಿನ ವಸತಿ ಶಾಲೆಯ ಕೊಠಡಿ, ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಡುಗೆಗೆ ಬಳಸುವ ನೀರನ್ನು ಹೊರಗೆ ಹರಿಸುವುದರಿಂದ ಸೊಳ್ಳೆಗಳ ಕಾಟ ಆರಂಭವಾಗುತ್ತದೆ. ಒಂದು ವಾರದೊಳಗೆ ಸೋರುತ್ತಿರುವ ಛಾವಣಿ ದುರಸ್ತಿ ಕೈಗೊಳ್ಳಬೇಕು. ಮತ್ತು ನಿರುಪಯುಕ್ತವಾಗಿರುವ ಶೌಚಾಲಯ ಬಳಕೆಗೆ ಮೂಲ ಸೌಕರ್ಯ ಕಲ್ಪಿಸಬೇಕು. ಮಕ್ಕಳ ವಸತಿ, ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂಥ ವಾತಾವರಣ ಕಲ್ಪಿಸಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚಿಸಿದರು.
ನಂತರ ಅಂಕುಶದೊಡ್ಡಿ ಗ್ರಾಪಂಯ ಹೂವಿನಬಾವಿಯ ಸಾಮಾಜಿಕ ಅರಣ್ಯ ಇಲಾಖೆಯ ನರ್ಸರಿಗೆ ಭೇಟಿ ನೀಡಿ, ಸಸಿಗಳ ಪೋಷಣೆ ಕುರಿತು ಮಾಹಿತಿ ಪಡೆದರು. ನಂತರ ಮಾರಲದಿನ್ನಿ ಜಲಾಶಯದ ಹತ್ತಿರ ಮತ್ತೊಂದು ನರ್ಸರಿ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಕಾಮಗಾರಿ ಸೇರಿಸಿ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಹರ್ವಾಪುರದಲ್ಲಿ ನರೇಗಾದಡಿ ನಿರ್ಮಿಸುತ್ತಿರುವ ಅಂಗನವಾಡಿ ಕೇಂದ್ರ ಪರಿಶೀಲಿಸಿದರು. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಗೇಟ್ ಅಳವಡಿಸಬೇಕು ಎಂದರು. ಜೆಜೆಎಂನಡಿ ಕೈಗೊಂಡಿರುವ ಕಾಮಗಾರಿಯನ್ನು ಬೇಗ ಮುಗಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಎಇಇ ಅವರಿಗೆ ಸೂಚಿಸಿದರು. ನಂತರ ಉದ್ಬಾಳ ಗ್ರಾ.ಪಂಯ ದುರ್ಗಾಕ್ಯಾಂಪ್ ನಲ್ಲಿ ಜೆಜೆಎಂ ಕಾಮಗಾರಿ ಪರಿಶೀಲಿಸಿದರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಉಮೇಶ್, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಶಿವಾನಂದರೆಡ್ಡಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಮಣ್ಣ ನಾಡಗೇರಿ, ಅರಣ್ಯ ಇಲಾಖೆ ಅಧಿಕಾರಿಗಳಾದ ವಿಜಯಕುಮಾರ್, ತಾಂತ್ರಿಕ ಸಂಯೋಜಕರಾದ ಶಿವಲಿಂಗಯ್ಯ ಹಿರೇಮಠ, ತಾಂತ್ರಿಕ ಸಹಾಯಕ ಅಭಿಯಂತರರಾದ ಪ್ರದೀಪ್, ಗ್ರಾಪಂ ಸಿಬ್ಬಂದಿ ಆನಂದ, ಮಂಜುನಾಥ ಇತರರಿದ್ದರು.