ಸಿರವಾರ: ಪೊಲೀಸರ ಸೋಗಿನಲ್ಲಿ ಬಂದು ಅಮಾಯಕ ವ್ಯಕ್ತಿಯಲ್ಲಿದ್ದ ಚಿನ್ನದ ಆಭರಣ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ತಾಲೂಕಿನ ಹರವಿ ಗ್ರಾಮದ ಬಳಿ ನಡೆದಿದೆ.
ಹಳ್ಳಿ ಹೊಸೂರು ಗ್ರಾಮದ ಆದೆಪ್ಪಗೌಡ ಎಂಬುವವರು ಕೆಲಸದ ನಿಮ್ಮಿತ್ತ ಮಾನ್ವಿಗೆ ತೆರಳಿದ್ದು, ಪುನಃ ಮನೆಗೆ ಬರುವ ವೇಳೆ ಇವರನ್ನು ಹಿಂಬಾಲಿಸಿ ಬಂದ ನಾಲ್ಕು ಜನರ ಗುಂಪು ಹರವಿ ಗ್ರಾಮದ ಬಳಿ ಇವರನ್ನು ತಡೆದು ನಾವು ಪೊಲೀಸರು ಸುತ್ತಮುತ್ತ ಕಳ್ಳತನ ಹೆಚ್ಚಾಗುತ್ತಿವೆ. ಬಂಗಾರದ ಆಭರಣಗಳನ್ನು ಈ ರೀತಿ ಧರಿಸಬಾರದು ಎಂದು ಎಚ್ಚರಿಕೆ ನೀಡಿ, ಅವರ ಚಿನ್ನದ ಆಭರಣಗಳನ್ನು ಚೀಲದಲ್ಲಿ ಹಾಕಿದ ಹಾಗೆ ಮಾಡಿ ಅವರ ಕೊರಳಲ್ಲಿದ್ದ 25ಗ್ರಾಂ ಸರ ಮತ್ತು 7ಗ್ರಾಂ ಉಂಗುರವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆದೆಪ್ಪಗೌಡ ರಾಯಚೂರು ಬೆಳಕು ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆ ನಡೆದಾಗ ಆದೆಪ್ಪಗೌಡ ಬಹಳ ಭಯಬೀತರಾಗಿದ್ದರು. ಅವರು ನಿಜವಾದ ಪೊಲೀಸರು ಇರಬಹುದು ಎಂದು ನಂಬಿದ ಆದೆಪ್ಪಗೌಡ ಅವರು ಹರವಿ ಗ್ರಾಮದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿ ಬಂದು ಚೀಲ ನೋಡಿಕೊಂಡಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಅವರಿಗೆ ಏನು ಮಾಡಬೇಕೆಂದು ತೋಚಿರಲಿಲ್ಲ. ಆನಂತರ ಅವರಿಗೆ ಅನುಮಾನ ಬಂದು ದೂರು ಕೊಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ.
ದಾಖಲಾಗದ ಪ್ರಕರಣ:ಕಳ್ಳತನ ನಡೆದ ಬಗ್ಗೆ ದೂರುದಾರರು ಪ್ರಕರಣ ದಾಖಲಿಸಲು ಸಿರವಾರ ಠಾಣೆಗೆ ನಾಲ್ಕು ದಿನದಿಂದ ಅಲೆಯುತ್ತಿದ್ದಾರೆ. ಆದರೂ ಸಹ ಇದುವರೆಗೂ ಪ್ರಕರಣ ದಾಖಲಾಗಿಲ್ಲ. ಕೇಸ್ ದಾಖಲಿಸಲು ಹಿಂದೇಟು ಹಾಕುತ್ತಿರುವ ಪೊಲೀಸರ ನಡೆ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪಿಎಸ್ಐ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ