ಹಟ್ಟಿಚಿನ್ನದಗಣಿ: ಕೋಠಾ ಗ್ರಾ.ಪಂ ಆಡಳಿತ ಸಿಬ್ಬಂದಿಯು ಕಚೇರಿಗೆ ಬೀಗ ಹಾಕಿ, ಮೋಜು-ಮಸ್ತಿಗೆ ತೆರಳಿರುವ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾ.ಪಂ ಕಚೇರಿಯಲ್ಲಿ ಪಿಡಿಒ, ಕಾರ್ಯದರ್ಶಿ, ಕರ ವಸೂಲಿಗಾರ ಸಿಬ್ಬಂದಿಯಿದ್ದಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಕಚೇರಿಯನ್ನು ತೆರೆದಿಲ್ಮೇಲಗತ್ಯ ಬಿದ್ದರೆ ತಮ್ಮ ಸಂಬಂಧಿಕರು ಅಥವಾ ಸ್ನೇಹಿತರಿಗೆ ಕರೆ ಮಾಡಿ ಕಚೇರಿ ಬೀಗ ತೆರೆದು, ಮತ್ತೆ ಮುಚ್ಚುತ್ತಾರೆ. ಜತೆಗೆ ಗ್ರಾ.ಪಂನ ನೀರಗಂಟಿಯೇ ಕಚೇರಿ ಕೆಲಸ ನಿರ್ವಸಹಿಸುತ್ತಿದ್ದಾರೆ. ಹೀಗಾಗಿ ಸಮಸ್ಯೆ ಆಲಿಸುವವವರು ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಸ್ವಚ್ಛತೆಯಿಲ್ಲದೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಸಂಬಂಧಿಸಿದ ಅಧಿಕಾರಿಗಳು, ಸದಸ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಿಡಿಒ ಗುರುಸಿದ್ದಪ್ಪ ಅವರಿಗೆ ಕೋಠಾ ಮತ್ತು ಗೆಜ್ಜಲಗಟ್ಟಾ ಗ್ರಾ.ಪಂ ಎರಡರ ಜವಾಬ್ದಾರಿ ವಹಿಸಲಾಗಿದೆ. ಸಿಬ್ಬಂದಿ ಕೊರತೆಯಿದ್ದು, ಮೇಲಧಿಕಾರಿಗಳಿಗೆ ಸಿಬ್ಬಂದಿ ನೇಮಕಕ್ಕೆ ಮನವಿ ಮಾಡಿದ್ದೇವೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಕೋಠಾ ಗ್ರಾ.ಪಂ ಕಚೇರಿಯಲ್ಲಿ ಆಡಳಿತಾಧಿಕಾರಿಗಳು ಇಲ್ಲದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಇತ್ತ ಕಡೆ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಕರ್ನಾಟಕ ಪ್ರಾಂತ್ಯ ಕೂಲಿ ಕಾರ್ಮಿಕರ ಸಂಘಟನೆ ತಾಲ್ಲೂಕು ಅಧ್ಯಕ್ಷ ಮಲ್ಲೇಶ ಮ್ಯಾಗೇರಿ ಆಗ್ರಹಿಸಿದ್ದಾರೆ.
ಕೋಠಾ ಗ್ರಾ.ಪಂ ಅಧ್ಯಕ್ಷರ ಆಯ್ಕೆಯಾದ ಮೇಲೆ ಒಂದು ದಿನವು ಇತ್ತ ಸುಳಿದಿಲ್ಲ. ಚರಂಡಿಯಲ್ಲಿ ಹೂಳು ತುಂಬಿಕೊಂಡು ಕೊಳಚೆ ನೀರು ರಸ್ತೆ ಮೇಲೆ ಹರಿದು ಓಡಾಟಕ್ಕೆ ತೊಂದರೆಯಾಗಿದೆ. ಜತೆಗೆ ಸೊಳ್ಳೆಗಳ ಆವಾಸಸ್ಥಾನವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಸಂಬಂಧ ಹಲವು ಬಾರಿ ಕ್ರಮಕೈಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ತಾಲ್ಲೂಕು ಆಡಳಿತದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.