ರಾಯಚೂರು. ಗಣೇಕಲ್ ಜಲಾಶಯದಿಂದ ರಾಂಪೂರ ಕುಡಿಯುವ ನೀರಿನ ಜಲಾಶಯಕ್ಕೆ ಕುಡಿಯುವ ನೀರನ್ನು ಹರಿಸುವ ವಿತರಣಾ ಕಾಲುವೆಯ ಮೂಲಕ ನೀರು ಹರಿಸುತ್ತಿದ್ದು ಕಾಲುವೆ ಮೇಲೆ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಆದೇಶ ಹೊರಡಿಸಿದ್ದಾರೆ.
ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ ಕೆಳ ಭಾಗದಲ್ಲಿರುವ ಕುಡಿಯುವ ನೀರಿನ ಕೆರೆಗಳಿಗೆ ಕಾಲುವೆ ಮೂಲಕ ನೀರನ್ನು ಹರಿಸಲು ನಿರ್ಧಸಿರುವುದರಿಂದ ನಿಗದಿತ ಗೇಜ್ ಗಳನ್ನು ಸಮರ್ಪಕವಾಗಿ ಕಾಯ್ದಿರಿಸಿಕೊಂಡು, ನ.17 ರಿಂದ 26ರ ವರೆಗೆ ನೀರು ಪೋಲಾಗುವುದನ್ನು ತಡೆಯಲು ಹಾಗೂ ರಾಂಪೂರು ಜಲಾಶಯಕ್ಕೆ ಸಮರ್ಪಕ ಕುಡಿಯುವ ನೀರು ನಿರ್ವಹಣೆಗೆ ಅನುವಾಗುವಂತೆ ಗಣೇಕಲ್ ಜಲಾಶಯದಿಂದ ರಾಂಪೂರ ಕುಡಿಯುವ ನೀರಿನ ಜಲಾಶಯಕ್ಕೆ ವಿತರಣಾ ಕಾಲುವೆ 95, 96, 98, 98, 98, 99, 99ಎ, 100, 102 ಮತ್ತು 102 (ಎ) ರ ವರೆಗೆ ಮೂಲಕ ಕುಡಿಯುವ ನೀರನ್ನು ಹರಿಸಿ, ಜಲಾಶ ಯವನ್ನು ತುಂಬಿಸಲಾಗುತ್ತದೆ.
ಸುತ್ತಮುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ 10 ದಿನಗಳವರೆಗೆ ಕಾಲುವೆ ಪ್ರದೇಶಗಳಲ್ಲಿ 100 ಮೀಟರ ವ್ಯಾಪ್ತಿಯಲ್ಲಿ 1973 ರ ದಂಡ ಪ್ರಕ್ರಿಯೆ ಸಂಹಿತೆ ಕಲಂ.144 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.