ಸಿರವಾರ: ಪಟ್ಟಣದ ಹೊರವಲಯದಲ್ಲಿರುವ 92ನೇ ವಿತರಣಾ ಕಾಲುವೆಯ ಎರಡು ಬದಿಯಲ್ಲಿ ಸುಮಾರು ಎರಡು ಕಿಲೋಮೀಟರ್ ವರೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಹಾಗೂ ನಿಷೇಧಿತ ಕ್ರಿಮಿನಾಶಕಗಳು ಅಲ್ಲಲ್ಲಿ ಪತ್ತೆಯಾಗಿವೆ.
ಅ.9ರಂದು ದಾಳಿ ಮಾಡಿದ ಹನುಮಾನ್ ಟ್ರೇಡರ್ಸ್ ಅವರಿಗೆ ಸೇರಿದ ಕ್ರಿಮಿನಾಶಕಗಳು ಎಂದು ಅನುಮಾನ ವ್ಯಕ್ತವಾಗಿದೆ. ದಾಳಿ ಮಾಡಿದ ಹಿನ್ನೆಲೆಯಲ್ಲಿ ತನಿಖೆ ಮಾಡಿದಾಗ ಅಧಿಕಾರಿಗಳಿಗೆ ಸಿಗುತ್ತವೆ ಎಂಬ ಭಯದಿಂದ ರಾತ್ರೋರಾತ್ರಿ ಎಸೆದು ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಅಧಿಕಾರಿಗಳಿಂದ ಪರಿಶೀಲನೆ: ಮಾಹಿತಿ ತಿಳಿದ ಕೂಡಲೇ ಕೃಷಿ ಇಲಾಖೆ ಜಾಗೃತ ದಳದ ಎ.ಡಿ ಶರಣಮ್ಮ ಹಾಗೂ ಸುಭಾನ್ ರೈತ ಸಂಘದ ಮುಖಂಡರೊಂದಿಗೆ ಸ್ಥಳಕ್ಕೆ ಧಿಡೀರ್ ಬೇಟಿ ನೀಡಿ ಕ್ರಿಮಿನಾಶಕಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದಾರೆ. ಹಾನಿಕಾರಕ ಕ್ರಿಮಿನಾಶಕಗಳನ್ನು ಎಸೆದವರ ಮೇಲೆ ದೂರು ದಾಖಲಿಸಲು ಹಿಂದೇಟು ಹಾಕಿದ ಪ್ರಸಂಗ ಜರುಗಿತು.
ಒತ್ತಾಯ: ಕಾಲುವೆಯ ಮೇಲೆ ಅವಧಿ ಮೀರಿದ ಕ್ರಿಮಿನಾಶಕ ಎಸೆದು ಹಾಕಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ನವಲಕಲ್ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹೊಳೆಪ್ಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವಲಿಂಗಪ್ಪ ಉಟಕನೂರು, ರವಿಕುಮಾರ್ ಉಟಕನೂರು, ಹನುಮಂತ್ರಾಯ ಬಲ್ಲಟಿಗಿ ಹಾಗೂ ಮಹೇಶ ಮಲ್ಲಟ, ಸುಲೇಚನ, ಯಲ್ಲಮ್ಮ, ಹುಸೇನಮ್ಮ, ಮರಿಬಸವ, ಭೀಮೇಶ, ಇದ್ದರು.